ಗುರುವಾರ, ಜುಲೈ 30, 2020

ಕರೆ

ವಿಶಾಲ್ ಕೆಲಸದ ಸಲುವಾಗಿ ಪುಣೆಗೆ ಬಂದು ನೆಲೆಸಿದ್ದ. ಬಂದು ಇನ್ನೂ ಹತ್ತು ದಿನವೂ ಆಗಿರಲಿಲ್ಲ. ತನ್ನ ಸ್ನೇಹಿತ ಕಾಶಿನಾಥ್ ನ ಮನೆಯಲ್ಲೇ ಉಳಿದುಕೊಂಡು ನೌಕರಿಗೂ ಹೋಗುತ್ತ, ತನಗಾಗಿ ಒಂದು ಮನೆಯನ್ನೂ ಹುಡುಕುತ್ತಿದ್ದ. ಹೇಗೋ ಕಷ್ಟಪಟ್ಟು ತನ್ನ ಸೌಕರ್ಯಕ್ಕೆ ತಕ್ಕಂತ ಮನೆಯನ್ನ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಹಿಡಿದ. "ಇನ್ನೂ ಏನಾದ್ರೂ ವ್ಯವಸ್ಥೆ ಆಗಬೇಕಂದ್ರೆ ಹೇಳಪ್ಪ, ಬೇಕಾದಾಗ ಬರ್ತೀನಿ." ಎಂದ ಕಾಶಿನಾಥ್. ವಿಶಾಲ್, "ಅದ್ಯಾಕೆ ಬೇಕಾದಾಗ ಮಾತ್ರ? ಯಾವಾಗಲೂ ಬರ್ತಾ ಇರಪ್ಪ. ನಂಗಾದ್ರು ಇಲ್ಲಿ ಯಾರು ಗೊತ್ತು ಹೇಳು." "ಆಯ್ತಪ್ಪ, ಬರ್ತೀನಿ. ನೀನೂ ಅಷ್ಟೇ, ಮನೆ ಸಿಕ್ತು ಅಂತ ನಮ್ಮನ್ನ ಮರೀಬೇಡ. ಬಿಡುವಾದಾಗೆಲ್ಲ ಮನೆಗೆ ಬಾ." ಎಂದು ಕಾಶಿ ವಿಶಾಲ್ ನ ಹೊಸ ಮನೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಟ್ಟು ಹೊರಡುತ್ತಾನೆ. ವಿಶಾಲ್ ತಾನು ಬೆಂಗಳೂರಿನಿಂದ ತಂದ ವಸ್ತುಗಳನ್ನೆಲ್ಲ ಮತ್ತೆ ತನಗೆ ಸರಿ ಅನ್ನಿಸಿದ ಹಾಗೆ ಜೋಡಿಸಿ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಇನ್ನು ತನ್ನ ಅವಶ್ಯಕತೆಗೆ ಇನ್ನೇನು ಸಾಮಾನು ಬೇಕು ಎಂದು ಪಟ್ಟಿ ಮಾಡಿ ಬರೆದಿಟ್ಟು ಸ್ನಾನ ಮಾಡಿ ಮಲಗಲು ಅಣಿಯಾಗುತ್ತಾನೆ. 

ವಿಶಾಲ್ ಬೆಂಗಳೂರಿನಲ್ಲಿ ಒಂದು ಎಂಜಿನಿಯರಿಂಗ್ ಕನ್ಸಲ್ಟೆನ್ಸಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇದ್ದ ಒಬ್ಬಳೇ ತಾಯಿ ತೀರಿದ ನಂತರ ಅಲ್ಲಿರಲು ಮನಸ್ಸಾಗದೆ ಬೇರೆಡೆ ಕೆಲಸ ಹುಡುಕುತ್ತಿದ್ದಾಗ, ಪುಣೆಯಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಬಂದಿದ್ದ. ಅತಿಯಾಗಿ ಹಚ್ಚಿಕೊಂಡಿದ್ದ ತಾಯಿಯ ನೆನಪು, ಬೆಂಗಳೂರಿನಲ್ಲಿದ್ದರೆ ಪದೇ ಪದೇ ಕಾಡಬಹುದು ಎಂದು ಅನ್ನಿಸಿದ್ದರಿಂದ ಸ್ವಲ್ಪ ಮನಸ್ಸಿಗೆ ಸಮಾಧಾನ ಬರುವವರೇಗಾದರೂ ಬೇರೆಡೆ ಕೆಲಸ ಮಾಡು ಎಂದು ಇದೇ ಕಾಶಿ ಸಲಹೆ ನೀಡಿದ್ದ. ವಿಶಾಲ್ ನ ತಾಯಿ ಸುಮಂಗಲ ಬಹಳ ಗಟ್ಟಿ ಹೆಂಗಸು. ಗಂಡ ಸತ್ತ ಮೇಲೆ ಒಬ್ಬಳೇ ಆದರೂ ಧೃತಿಗೆಡದೆ, ಒಂದು ಕೆಲಸ ಹುಡುಕಿ ತನ್ನ ಕಾಲ ಮೇಲೆ ನಿಲ್ಲುವುದಷ್ಟೇ ಅಲ್ಲದೆ, ವಿಶಾಲ್ ನನ್ನು ದತ್ತು ಪಡೆದು ಸಾಕಿ ಬೆಳೆಸಿದ್ದಳು. ಈ ವಿಷಯವನ್ನು ವಿಶಾಲ್ ಗೆ ತಿಳುವಳಿಕೆ ಬಂದಮೇಲೆ ತಾನೇ ಕರೆದು ಹೇಳಿದ್ದಳು. ಮೊದಲಿಗೆ ಬಹಳ ಬೇಸರವಾದರೂ ವಿಶಾಲ್ ಆಕೆಯಂತೆಯೇ ಗಟ್ಟಿತನ ಬೆಳೆಸಿಕೊಂಡಿದ್ದರಿಂದ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತನ್ನ ತಾಯಿಯ ಬಗ್ಗೆ ಇನ್ನೂ ಅಭಿಮಾನ, ಪ್ರೀತಿ ಬೆಳೆಸಿಕೊಂಡಿದ್ದ. ಆದರೆ ಆಕೆಗೆ ಅರವತ್ತೈದು ವಯಸ್ಸು ತಲುಪುವ ವೇಳೆಗೆ ಆಕೆಗೆ ಕ್ಯಾನ್ಸರ್ ಬಂದು, ಅದು ತಿಳಿಯುವ ವೇಳೆಗಾಗಲೇ ತಡವಾಗಿದ್ದರಿಂದ, ಗೊತ್ತಾದ ಒಂದು ವರ್ಷದಲ್ಲೇ ಅಸುನೀಗಿದಳು. ಇದು ವಿಶಾಲ್ ಗೆ ತುಂಬಲಾರದ ನಷ್ಟವಾಗಿತ್ತು. ತಾನು ಸಾಕಿದ ಮಗ ಎಂದು ತಿಳಿದಾಗಲೂ ಆಗದಷ್ಟು ದುಃಖ ಈಗವನಿಗಾಗಿತ್ತು. ನಿಧಾನವಾಗಿ ಕೆಲಸದಲ್ಲೂ ಆಸಕ್ತಿ ಕಳೆದುಕೊಳ್ಳತೊಡಗಿದ್ದ. ಆಗಲೇ, ಪುಣೆಯ ಸ್ನೇಹಿತ ಕಾಶಿ ಈತನಿಗೆ ಸಾಂತ್ವನ ಹೇಳಿ ಕೆಲ ದಿನಗಳವರೆಗೆ ಬೇರೆ ಊರಿನಲ್ಲಿ ಕೆಲಸ ಮಾಡಲು ಸಲಹೆ ನೀಡಿದ್ದ. 

 ಮನೆಗೆ ಒಂದೆರಡು ಹೊಸ ಬಲ್ಬ್ ಗಳು, ಹೊಸ ಇಂಟರ್ ನೆಟ್ ಸಂಪರ್ಕ ಮತ್ತಿನ್ನೇನು ಬೇಕಾಗಬಹುದು? ಎಂದು ವಿಶಾಲ್ ಯೋಚಿಸುತ್ತಿದ್ದ. ಗ್ಯಾಸ್ ಗೆ ಹೇಳುವುದೋ ಬೇಡವೋ ಎಂದು ಬಹಳ ಯೋಚಿಸಿ, ಇರೋದು ತಾನೊಬ್ಬನೇ, ಗ್ಯಾಸ್ ನವನು ಬಂದಾಗ ನಾ ಮನೆಯಲ್ಲಿರದಿದ್ದರೆ ಅದರ ಹಿಂದೆ ಅಲೆಯೋ ಫಜೀತಿ ಬೇರೆ ಯಾಕೆ ಎಂದು ಎಲೆಕ್ಟ್ರಿಕ್ ಸ್ಟೋವ್ ನಲ್ಲೇ ಮಾಡಿಕೊಳ್ಳೋಣ ಎಂದುಕೊಂಡ. ಹೇಗೂ ಅಪಾರ್ಟ್ಮೆಂಟ್ ನಲ್ಲಿ ಪವರ್ ಬ್ಯಾಕ್ ಅಪ್ ಇದೆ. ಹಾಗೂ ಅಡಿಗೆ ಮಾಡಿಕೊಳ್ಳಲು ಬೇಜಾರಾದರೆ, ಏನಾದರು ತರಿಸಿಕೊಂಡು ತಿನ್ನಬಹುದು ಎಂದು ಯೋಚಿಸಿ ಅಡಿಗೆ ಗ್ಯಾಸನ್ನು ಪಟ್ಟಿಯಿಂದ ತೆಗೆದುಬಿಟ್ಟಿದ್ದ. 

 ಭಾನುವಾರ ಮನೆಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನೆಲ್ಲ ತಂದಿಟ್ಟುಕೊಂಡು, ಸೋಮವಾರ ಬಿಎಸ್ಎನ್ಎಲ್ ಆಫೀಸಿಗೆ ಹೋಗಿ ಇಂಟರ್ನೆಟ್ ಕನೆಕ್ಷನ್ ಗೆ ಅರ್ಜಿ ಹಾಕಲು ಹೋದ. ಅಡ್ರೆಸ್ ಪ್ರೂಫಿಗೆ ಮನೆ ರೆಂಟ್ ಅಗ್ರಿಮೆಂಟ್ ನಡೆಯುತ್ತ ಅಂತ ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದ. ಆತ ಕೊಟ್ಟ ಅರ್ಜಿಯನ್ನ ಒಮ್ಮೆ ಪರಿಶೀಲಿಸಿ, ಕೊಟ್ಟಿರೋದು ಏನೂ ಸಾಲದು ಎಂಬಂತೆ ವಿಕಾರ ಮೂತಿ ಮಾಡಿ ಇವನತ್ತ ನೋಡಿದ. "ಊರಿಗೆ ಹೊಸಬರ?" ಅಂತ ಮರಾಠಿಯಲ್ಲಿ ಕೇಳಿದ. ಅದನ್ನು ತಿಳಿಯದ ವಿಶಾಲ್ "ಐ ಡೋಂಟ್ ನೋ ಮರಾಠಿ. ಐಯಾಮ್ ಫ್ರಮ್ ಬ್ಯಾಂಗಲೋರ್" ಎಂದ. ಇದನ್ನ ಕೇಳಿದ ಆ ವ್ಯಕ್ತಿ ಮುಖ ಇನ್ನೂ ವಿಕಾರ ಮಾಡಿಕೊಂಡು ಏನೋ ಗೋಣಗಿಕೊಂಡು ವಿಶಾಲ್ ಕಡೆಗೆ ತಿರುಗಿ," ಕನೆಕ್ಷನ್ ಟೂ ಡೇ ಆಫ್ಟರ್. ಲೈನ್ಮ್ಯಾನ್ ಕಮ್ ಟೂ ಡೇ ಆಫ್ಟರ್" ಎಂದ. ಅದಕ್ಕೆ ವಿಶಾಲ್ ಹೂ ಎನ್ನುವಂತೆ ತಲೆ ಆಡಿಸಿದ ಮೇಲೆ ಪ್ಲಾನ್ ಡೀಟೇಲ್ಸ್ ತೆಗೆದುಕೊಂಡು ದುಡ್ಡು ಕಟ್ಟಿಸಿಕೊಂಡು ಕಳಿಸಿದ. ವಿಶಾಲ್ ನ ಅಪಾರ್ಟ್ಮೆಂಟ್ ಊರಿನ ಹೊರವಲಯದಲ್ಲಿದ್ದಿದ್ದರಿಂದ ಆತನ ಅಪಾರ್ಟ್ಮೆಂಟ್ ನ ಎಲ್ಲ ಮನೆಗಳಲ್ಲೂ ಜನರಿನ್ನೂ ಬಂದು ಸೇರಿಕೊಂಡಿರಲಿಲ್ಲ. ಮಂಗಳವಾರ ಆಫೀಸಿಗೆ ಹೋಗಿ ಕೆಲಸದಲ್ಲಿ ತೊಡಗಿಕೊಂಡಿದ್ದಾಗ, ಹನ್ನೊಂದರ ಸುಮಾರಿಗೆ ಅವನ ಮೊಬೈಲಿಗೆ ಒಂದು ಕರೆ ಬರುತ್ತದೆ. ಅತ್ತ ಕಡೆಯ ವ್ಯಕ್ತಿ ಮರಾಠಿಯಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಕನೆಕ್ಷನ್ ಎಂದು ಏನೋ ಹೇಳುತ್ತಿದ್ದ. ಸ್ಪಷ್ಟವಾಗಿ ಏನೆಂದು ತಿಳಿಯದ ವಿಶಾಲ್ ತನ್ನ ಸಹೋದ್ಯೋಗಿಯೊಬ್ಬನ ಸಹಾಯದಿಂದ ಕರೆ ಮಾಡಿದ ಲೈನ್ ಮ್ಯಾನ್ ಯಾವಾಗ ಬರುವನೆಂದು ತಿಳಿದು ಮನೆಗೆ ಹೋಗುತ್ತಾನೆ. ಕಚೇರಿಯಲ್ಲಿ ಮಾಡಲು ಕೆಲಸ ಅಷ್ಟೊಂದು ತುರ್ತಿರಲಿಲ್ಲವಾದ್ದರಿಂದ ಬಾಸ್ ಬಳಿ ಅಪ್ಪಣೆ ಪಡೆಯುವುದೇನೂ ಕಷ್ಟವಾಗಲಿಲ್ಲ. ಮನೆಗೆ ಹೋಗಿ ಕಾಯುತ್ತ ಕುಳಿತಾಗ ಲೈನ್ ಮ್ಯಾನ್ ಬಂದು ಫೋನ್ ಹಾಕಿಕೊಟ್ಟು, ಮಾಡೆಮ್ ಕನೆಕ್ಟ್ ಮಾಡಿ ಇಂಟರ್ನೆಟ್ ಕೂಡ ಸಂಪರ್ಕ ಮಾಡಿಕೊಡುತ್ತಾನೆ. ಎಲ್ಲ ಎಷ್ಟು ಬೇಗ ಆಯಿತಲ್ಲ ಎಂದು ವಿಶಾಲ್ ಗೂ ಆಶ್ಚರ್ಯವಾಗಿ ಲೈನ್ ಮ್ಯಾನಿಗೆ ಕಾಫಿ-ತಿಂಡಿಗೆ ದುಡ್ಡು ಕೊಟ್ಟು ಕಳುಹಿಸುತ್ತಾನೆ. ಪುಣೆಗೆ ಬಂದು ವಿಶಾಲ್ ಅಲ್ಲಿಗೆ ಸಂಪೂರ್ಣವಾಗಿ ಬೇರೂರಿದಂತ ಅನುಭವದಿಂದ ಕೂರುತ್ತಾನೆ. ಈಗಿನ ಕಾಲವೇ ಹಾಗಲ್ಲವೇ? ಹೊಸ ಊರಿನಲ್ಲಿ ಬಂದು ಏನೆಲ್ಲ ವ್ಯವಸ್ಥೆ ಮಾಡಿಕೊಂಡರೂ ಈ ಇಂಟರ್ ನೆಟ್ ಇಲ್ಲದಿದ್ದರೆ ಕೈ ಕಾಲೇ ಆಡುವುದಿಲ್ಲ. ಬೇರೆನಿಲ್ಲದಿದ್ದರೂ ಹೇಗೋ ವ್ಯವಸ್ಥೆ ಮಾಡಿಕೊಳ್ಳಬಹುದೇನೋ, ಆದರೆ ಇಂಟರ್ ನೆಟ್ ಎಂದರೆ ಈಗಿನವರಿಗೆ ಅಷ್ಟು ಅತ್ಯಾವಶ್ಯಕ. 

 ಹೊಸ ಊರಿನಲ್ಲಿ ವಿಶಾಲ್ ನ ಬದುಕು ಸರಾಗವಾಗಿ ಕಳೆಯುತ್ತಿತ್ತು. ಅಮ್ಮನ ನೆನಪು ಆಗಾಗ ಬರುತ್ತಿತ್ತಾದರೂ, ಈಗ ಮನಸ್ಸು ಸ್ವಲ್ಪ ಸಮಾಧಾನಕ್ಕೆ ಮರಳುತ್ತಿತ್ತು. ಬೆಳಗ್ಗೆಯೇ ಬೇಗೆದ್ದು, ತಿಂಡಿ ತಿಂದು, ಮಧ್ಯಾಹ್ನದ ಊಟಕ್ಕೆ ಡಬ್ಬಿ ಕಟ್ಟಿಕೊಂಡು ಸರಿಯಾದ ಸಮಯಕ್ಕೆ ಕಚೇರಿ ತಲುಪುತ್ತಿದ್ದ. ಕೆಲಸವೂ ಬೆಂಗಳೂರಿನ ಕಂಪೆನಿಯಂತೆಯೇ ಇದ್ದಿದ್ದರಿಂದ ಅಷ್ಟೇನೂ ಕಷ್ಟವಾಗಿರಲಿಲ್ಲ. ಸಾಯಂಕಾಲ ಮನೆಗೆ ಬಂದು ರಾತ್ರಿಯ ಅಡಿಗೆ ಮಾಡಿ ಉಂಡು, ಲ್ಯಾಪ್ ಟಾಪ್ ನಲ್ಲಿ ಸಿನೆಮಾ ನೋಡಿ ಮಲಗಿಕೊಳ್ಳುವುದು ಅವನ ರೂಢಿಯಾಗಿತ್ತು. ವಾರಾಂತ್ಯಕ್ಕೆ ಸ್ನೇಹಿತ ಕಾಶಿಯ ಮನೆಗೆ ಹೋಗಿ ಅಲ್ಲೇ ಕಳೆದು ಬರುತ್ತಿದ್ದ. ಹೀಗೇ ಒಂದೆರಡು ತಿಂಗಳು ಕಳೆಯುತ್ತಲೂ, ಕಚೇರಿಯಲ್ಲಿ ಕೆಲಸದ ಒತ್ತಡವೂ ಹೆಚ್ಚಾದ್ದರಿಂದ ಇತ್ತೀಚೆಗೆ ಕಾಶಿಯ ಮನೆಗೆ ಹೋಗುವುದನ್ನು ನಿಲ್ಲಿಸಿದ್ದ. ವಾರಾಂತ್ಯವೂ ಕೆಲವೊಮ್ಮೆ ಕೆಲಸವಿರುತ್ತಿತ್ತು. ಒಂದು ದಿನ ತುಂಬಾ ಕೆಲಸ ಮಾಡಿ ದಣಿವಾಗಿ ಮನೆಗೆ ನಡೆದು ಬರುತ್ತಿದ್ದಾಗ, ಮಳೆ ಶುರುವಾಗಿ, ನೆನೆಯುತ್ತಲೇ ಮನೆಗೆ ಓಡಿಬಂದು ಸೇರಿಕೊಂಡಿದ್ದ. ಮನೆಗೆ ಬಂದು ಬಟ್ಟೆ ಬದಲಾಯಿಸಿ ಅಡಿಗೆ ಮಾಡಿಕೊಂಡು ಉಂಡು, ಉಳಿದ ಕೆಲಸಗಳನ್ನೆಲ್ಲ ಪೂರೈಸಿ ಸಿನೆಮಾ ನೋಡದೆ ಹತ್ತು ಗಂಟೆಗೆ ಮಲಗಿಕೊಂಡ. ಮಲಗಿ ಒಂದೆರೆಡು ತಾಸಾಗಿರಬಹುದು. ಅವನ ಲ್ಯಾನ್ಡ್ ಲೈನ್ ಫೋನ್ ಗೆ ಒಂದು ಕರೆ ಬಂದು ರಿಂಗಣಿಸತೊಡಗಿತು. ಅದರ ಶಬ್ದಕ್ಕೆ ಎಚ್ಚರಗೊಂಡ ವಿಶಾಲ್ ಇಷ್ಟು ಹೊತ್ತಿನಲ್ಲಿ ಯಾರಪ್ಪ ಕರೆಮಾಡಿದವರು ಎಂದು ಗೋಣಗುತ್ತ ಫೋನ್ ಎತ್ತಿಕೊಂಡು ಹಲೋ ಎನ್ನುತ್ತಾನೆ. ಅತ್ತಲಿಂದ ಏನೂ ಉತ್ತರವಿಲ್ಲ. ಇವನು ಮತ್ತೆ ಹಲೋ ಎನ್ನುತ್ತಾನೆ. ಉತ್ತರವಿಲ್ಲ. ಸಿಟ್ಟು ಬಂದು ಫೋನನ್ನು ಕುಕ್ಕಿ ಮಲಗಿಕೊಳ್ಳುತ್ತಾನೆ. 

  ಬೆಳಗೆದ್ದು ಎಂದಿನಂತೆ ತಿಂಡಿ ತೀರ್ಥ ಮಾಡಿ ಕಚೇರಿಗೆ ಹೊರಟುಹೋಗುತ್ತಾನೆ. ಕಚೇರಿಯಲ್ಲಿ ಕೆಲಸದಲ್ಲಿ ಸ್ವಲ್ಪ ಬಿಡುವಾದಾಗ ಹಿಂದಿನ ರಾತ್ರಿ ಬಂದ ಕರೆಯ ಬಗ್ಗೆ ಯೋಚಿಸುತ್ತಾನೆ. ನೆನ್ನೆ ಯಾರು ಹಾಗೆ ಕರೆ ಮಾಡಿದವರು? ನಾನು ಯಾರಿಗೂ ನನ್ನ ನಂಬರ್ ಕೊಟ್ಟಿಲ್ಲ, ಕಾಶಿಗೂ ಸಹ ಕೊಟ್ಟಿಲ್ಲ. ಮೊಬೈಲ್ ನಂಬರ್ ಇದೆಯಲ್ಲ, ಇನ್ಯಾಕೆ ಲ್ಯಾನ್ಡ್ ಲೈನ್ ನಂಬರ್? ಮತ್ತೆ ಇನ್ಯಾರು ಮಾಡಿಯಾರು? ಯಾವುದೋ ರಾಂಗ್ ನಂಬರ್ ಅಂದುಕೊಂಡರೂ ಕರೆ ಮಾಡಿದಮೇಲೆ ಯಾಕೆ ಉತ್ತರಿಸಲಿಲ್ಲ? ಎಂದು ಸುಮ್ಮನೆ ಹಿಂದಿನ ರಾತ್ರಿಯ ಕರೆಯ ಬಗ್ಗೆ ಯೋಚಿಸುತ್ತ ಕೂರುತ್ತಾನೆ. ಕೆಲಸ ಮುಗಿಸಿ ಮತ್ತೆ ಮನೆಗೆ ಮರಳಿ ಎಂದಿನಂತೆ ಮನೆ ಕೆಲಸ ಮುಗಿಸಿ ಸಿನೆಮಾ ನೋಡಲು ಕೂರುತ್ತಾನೆ. ಸಿನೆಮಾ ಅರ್ಧ ಮುಗಿದಿರಬೇಕು, ಗಂಟೆ ಒಂಬತ್ತಾಗಿತ್ತು. ನೀರು ಕುಡಿಯಲು ಎದ್ದು ಅಡಿಗೆಮನೆಗೆ ಹೋಗುತ್ತಾನೆ. ನೀರು ಕುಡಿದು ಮರಳುತ್ತಿದ್ದಾಗ ಫೋನ್ ಮತ್ತೆ ರಿಂಗಣಿಸುತ್ತದೆ. ಈಗ ಯಾರದ್ದಪ್ಪ ಎಂದು ಫೋನ್ ಎತ್ತಿ ಹಲೋ ಎಂದರೆ ಉತ್ತರವಿಲ್ಲ. ಇವನು ಮತ್ತೆ ಹಲೋ ಎನ್ನುತ್ತಾನೆ. ಅತ್ತಕಡೆಯಿಂದ ಯಾರೋ ಏದುಸಿರು ಬಿಡುತ್ತಿರುವ ಸದ್ದು ಕೇಳಿಸುತ್ತದೆ. ಅಂದರೆ ಯಾರೋ ಬೇಕಂತಲೇ ಸುಮ್ಮನೆ ಮಾತನಾಡದೇ ಹೀಗೆ ಮಾಡುತ್ತಿದ್ದಾರೆ ಎಂದು ವಿಶಾಲ್ "ಹಲೋ ಯಾರ್ರೀ ಅದು? ಹೂ ಈಸ್ ಇಟ್?" ಜೋರಾಗಿ ಕೇಳುತ್ತಾನೆ. ಕರೆ ಅಲ್ಲಿಗೆ ಕಟ್ ಆಗುತ್ತದೆ. ಇದರಿಂದ ವಿಚಲಿತನಾದ ವಿಶಾಲ್ ಇದರ ಬಗ್ಗೆ ಯೋಚಿಸುತ್ತ ಹಾಗೆ ಮಲಗಿ ನಿದ್ರಿಸುತ್ತಾನೆ. ಮತ್ತೆ ಬೆಳಗ್ಗೆ ಎಚ್ಚರವಾಗಿ ದಿನದ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾನೆ. ಆ ದಿನವೆಲ್ಲ ಕೆಲಸದಲ್ಲೆ ಮಗ್ನನಾಗಿ ಕಳೆದದ್ದರಿಂದ ಫೋನಿನ ಕರೆಯ ಬಗ್ಗೆ ಚಿಂತಿಸದೆ ಮನೆಗೆ ಮರಳಿ ಮನೆಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾನೆ. ಅಂದು ಸಿನೆಮಾ ನೋಡದೆ ಫೋನಿಗಾಗಿ ಕಾಯುತ್ತಾನೆ. ಆದರೆ ಯಾವ ಕರೆಯೂ ಬಾರದಿದ್ದದ್ದನ್ನು ನೋಡಿ ನೆಮ್ಮದಿಯಾಗಿ ಮಲಾಗುತ್ತಾನೆ. ಮರುದಿನ ಶನಿವಾರವಾದ್ದರಿಂದ, ಸೂಪರ್ ಮಾರ್ಕೆಟ್ ಗೆ ಹೋಗಿ ಬೇಕಾದ ದಿನಸಿ ತಂದಿಟ್ಟು ಕಾಶಿ ಮನೆಗೆ ಹೋಗುತ್ತಾನೆ. ಭಾನುವಾರ ರಾತ್ರಿ ಊಟ ಮುಗಿಸಿ ಮರಳಿ ತನ್ನ ಮನೆಗೆ ಬಂದು ಮಲಗಿಕೊಳ್ಳುತ್ತಾನೆ. ಸೋಮವಾರ ಎದ್ದು ಕಚೇರಿಗೆ ಹೋಗಿ ಕುಳಿತಾಗ ಫೋನಿನ ಪ್ರಸಂಗವನ್ನೆಲ್ಲ ನೆನೆದು ಸುಮ್ಮನೆ ತಲೆಕೆಡಿಸಿಕೊಂಡಿದ್ದೆ ಎಂದು ತನ್ನ ಬಗ್ಗೆ ತಾನೇ ಮನಸ್ಸಿನಲ್ಲಿ ನಗುತ್ತಾನೆ. ಎಷ್ಟು ಹೆದರಿದ್ದೆನಲ್ಲ. ಅಂದಿನ ಕೆಲಸವನ್ನೆಲ್ಲ ಉಲ್ಲಾಸದಿಂದ ಮಾಡಿಮುಗಿಸಿ ಮನೆಗೆ ಮರಳಿ ಉಂಡು ಸಿನೆಮಾ ನೋಡಿ ಮಲಗುತ್ತಾನೆ. ಮಲಗಿ ಒಂದು ಅರ್ಧ ಗಂಟೆಯಾಗಿಲ್ಲ, ಆಗ ಫೋನು ರಿಂಗಣಿಸುತ್ತದೆ. ವಿಶಾಲ್ ಎಚ್ಚರಗೊಂಡು ಸ್ವಲ್ಪ ಕಳವಳವದಿಂದ ಮೆಲ್ಲಗೆ ಫೋನ್ ಎತ್ತಿ ಹಲೋ ಎನ್ನುತ್ತಾನೆ. ಮತ್ತೆ ಅದೇ ಉಸಿರಿನ ಶಬ್ದ. ಈ ಬಾರಿ ಫೋನನ್ನು ಮತ್ತೆ ಕುಕ್ಕುವ ಮೊದಲೇ ಅತ್ತಲಿಂದ ಒಂದು ಧ್ವನಿ ಕನ್ನಡದಲ್ಲಿಯೇ ಕೇಳುತ್ತದೆ," ಹೇಗಿದ್ದೀಯ ವಿಶಾಲ್?" ವಿಶಾಲ್ ದೇಹ ತಣ್ಣಗಾಗಿ ಉಸಿರು ಹೊರಡಿಸಲೂ ಆಗದಂತೆ ಮೂಕನಾಗಿ ಉತ್ತರಿಸಲು ಕಷ್ಟಪಡುತ್ತಾನೆ. ಆದರೂ ಸ್ವಲ್ಪ ಸಾವರಿಸಿಕೊಂಡು, "ಯಾರಿದು?" ಎಂದು ಕೇಳುತ್ತಾನೆ. "ನಾನು ನಿನ್ನ ಸ್ನೇಹಿತೆ ವಿಶಾಲ್, ನಿನ್ನ ಸ್ನೇಹಿತೆ.", ಆ ಧ್ವನಿ ಉತ್ತರಿಸುತ್ತದೆ. " ಸ್ನೇಹಿತೆ? ಯಾವ ಸ್ನೇಹಿತೆ? ಏನು ನಿನ್ನ ಹೆಸರು? ಈ ನಂಬರ್ ನಿಂಗೆ ಹೇಗೆ ಸಿಕ್ತು?" ಎಂದು ವಿಶಾಲ್ ಕೇಳುತ್ತಾನೆ. 
" ಸಮಾಧಾನ ವಿಶಾಲ್. ಹೇಳಿದೆನಲ್ಲ ನಾನು ನಿನ್ನ ಸ್ನೇಹಿತೆ." 
" ನಿನಗೇನು ಹೆಸರಿಲ್ವೆ?" 
" ಹೆಸರಿನಿಂದ ಈಗೇನು ಪ್ರಯೋಜನ ವಿಶಾಲ್? ನಿನ್ನ ಬರುವಿಗಾಗಿಯೇ ಕಾದಿದ್ದೆ. ಈಗ ನೀ ಬಂದೆಯಲ್ಲ ಅಷ್ಟು ಸಾಕು." ಎಂದಾಗ ವಿಶಾಲ್ ಮುಖದಲ್ಲಿ ಕಳವಳ ಇನ್ನೂ ಹೆಚ್ಚಾಗಿ ಇದ್ಯಾರು ಹೀಗೆ ನನ್ನೊಡನೆ ಆಟವಾಡುತ್ತಿದ್ದಾರೆ ಎಂದು ಚಿಂತಿಸುತ್ತಾನೆ. 
"ಈಗೇನಾಗಬೇಕು? " 
" ನೀನು ಆರಾಮಾಗಿ ಮಲಗಿಕೊ ವಿಶಾಲ್. ನಾನು ಮತ್ತೆ ನಾಳೆ ಬರುತ್ತೇನೆ. " ಎಂದು ಫೋನ್ ಕರೆ ಕಟ್ ಆಗುತ್ತದೆ. 

 ವಿಶಾಲ್ ಬಂದ ಕರೆಯಿಂದ ಹೆದರಿದ್ದನಾದರೂ ಸಮಯ ಪ್ರಜ್ಞೆ ಕಳೆದುಕೊಳ್ಳದೆ ಕರೆ ಬಂದ ನಂಬರ್ ಬರೆದಿಟ್ಟುಕೊಳ್ಳುತ್ತಾನೆ. ಆದರೆ ಕಾಲರ್ ಐಡಿಯಲ್ಲಿ ತೋರಿಸುತ್ತಿದ್ದ ನಂಬರ್ ಎಲ್ಲವೂ ಸೊನ್ನೆ. ಇದು ಹೇಗೆ ಸಾಧ್ಯ? ಇದೇನು ತೊಂದರೆ ಬಂದೊದಗಿತಲ್ಲ ಎಂದು ಚಿಂತಿಸುತ್ತಾ ನೀರು ಕುಡಿದು ಬಂದು ಮಲಗಲು ಪ್ರಯತ್ನಿಸುತ್ತಾನೆ. ಮೊದಲಿಗೆ ಕಷ್ಟವೆನಿಸಿದರೂ ಬೆಳಗಿನ ಜಾವದಷ್ಟು ಹೊತ್ತಿಗೆ ಕಣ್ಣುಗಳು ಭಾರವಾಗಿ ನಿದ್ದೆ ಹತ್ತುತ್ತದೆ. ಮರುದಿನ ಇದರ ಬಗ್ಗೆ ಹೆಚ್ಚು ಯೋಚಿಸದೆ ಕಚೇರಿ ತಲುಪಿ ಕೆಲಸ ಮಾಡಿ ಮತ್ತೆ ಮನೆಗೆ ಮರಳುತ್ತಾನೆ. ಊಟ ಮುಗಿಸಿ ಮತ್ತೆ ಯಾವಾಗ ಕರೆ ಬರುವುದೋ ಎಂದು ಕಾಯುತ್ತಾನೆ. ಆದರೆ ಸುಮ್ಮನೆ ಕಾಯದೆ ಈ ಕರೆಯ ಮರ್ಮ ಏನಿರಬಹುದು ಎಂದು ಮನದಲ್ಲೇ ಯೋಚಿಸುತ್ತ ಕೂರುತ್ತಾನೆ. ಯಾರಾದರೂ ನನ್ನ ಜೊತೆ ಆಟವೇನಾದರೂ ಆಡುತ್ತಿದ್ದಾರಾ? ಹಾಗೇನಾದರು ಇದ್ದರೆ ಇದೆಂಥ ವಿಕೃತಿ? ಆಟವೇ ಆಗಿದ್ದರೆ ಇದು ತಮಾಷೆಯ ಎಲ್ಲೆ ಮೀರಿದೆ ಎಂದುಕೊಂಡ. ಹಾಗೆ ಕಿಟಕಿಯ ಬಳಿ ಕಣ್ಣು ಹಾಯಿಸುತ್ತಲೇ ಟೆಲಿಫೋನಿನ ಎರಡು ತಂತಿಗಳು ಮನೆಯೊಳಗೆ ಬಂದಿರುವಂತೆ ಕಂಡವು. ಅರೆ, ಇದ್ಹೇಗೆ ಸಾಧ್ಯ? ಫೋನಿಗೆ ಹೊರಗಿನಿಂದ ಬರುವುದು ಒಂದೇ ತಂತಿ ಅಲ್ಲವೇ? ಎಂದು ಎರಡನೇ ತಂತಿ ಹಿಡಿದು ಅದು ಮನೆಯೊಳಗೆ ಎಲ್ಲಿಗೆ ಬಂದಿದೆ ಎಂದು ನೋಡುತ್ತಾನೆ. ಏನೂ ತಿಳಿಯುವುದಿಲ್ಲ. ಏಕೆಂದರೆ ಹೊರಗಿನಿಂದ ಎಳೆದ ತಂತಿ ಗೋಡೆಯೊಳಗೆ ಹೋಗಿ ಮನೆಯೊಳಗಿನ ಒಂದು ಟೆಲಿಫೋನ್ ಸಾಕೇಟ್ ನಲ್ಲಿ ಹೊರಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇಷ್ಟರಲ್ಲಿ ಫೋನು ರಿಂಗಣಿಸಿತು. ಮೊದಲು ಇದರ ರಹಸ್ಯ ಭೇದಿಸಿ ಆಮೇಲೆ ಈ ಫೋನಿನ ಮೋಹಿನಿಯನ್ನು ವಿಚಾರಿಸಿಕೊಳ್ಳೋಣ ಎಂದು ವಿಶಾಲ್ ಫೋನು ತಂತಿಯ ಬಗ್ಗೆ ಯೋಚಿಸುತ್ತಾನೆ. ಒಳಗೆ ಹುಡುಕುವುದು ಬೇಡ, ಹೋರಾಗಿನಿಂದಲೇ ನೋಡುವ ಎಂದು ಅಪರ್ಟ್ಮೆಂಟಿನಿಂದ ಕೆಳಗಿಳಿದು ಕಂಪೌಂಡಿನ ಹೊರಗೆ ಹೋಗಿ ತನ್ನ ಮನೆಯ ಕಿಟಕಿ ನೋಡುತ್ತಾನೆ. ಹೌದು, ಎರಡು ಫೋನಿನ ತಂತಿ ಮನೆಯೊಳಗೆ ಹೋಗಿವೆ. ಒಂದರ ಜಾಡು ಹಿಡಿದು ನೋಡಿದರೆ, ಲೈನ್ ಮ್ಯಾನ್ ಟೆಲಿಫೋನು ಕಂಬದಿಂದ ಎಳೆದ ತಂತಿಯೇ. ಹಾಗಿದ್ದರೆ ಒಂದು ತಾನು ಹಾಕಿಸಿದ ತಂತಿ. ಇನ್ನೊಂದರ ಜಾಡು ಹಿಡಿದು ಹಾಗೆಯೇ ಕಣ್ಣಲ್ಲೇ ಅದನ್ನು ಹಿಂಬಾಲಿಸಿ ನೋಡಿದಾಗ ತನ್ನ ಅಪಾರ್ಟ್ಮೆಂಟಿನಿಂದ ಹೊರಗೆ ಬಂದು ಕಂಪೌಂಡಿನ ಒಂದು ಮೂಲೆಯಿಂದ ಬೀದಿಗೆ ಇಳಿದಿರುವಂತೆ ಕಂಡಿತು. ಅದನ್ನು ಹಾಗೆ ಹಿಂಬಾಲಿಸಿ ಕಂಪೌಂಡಿನ ಮೂಲೆಯಲ್ಲಿ ನೆಲಕ್ಕೆ ಬಿದ್ದ ತಂತಿಯನ್ನು ಹಿಡಿದು ಹಾಗೆ ಮುಂದೆ ನಡೆಯುತ್ತಾನೆ. ಓಹ್ ಯಾರದೋ ಕಿತಾಪತಿಯೇ ಇದು ಎಂದು ರಹಸ್ಯ ಭೇದಿಸಿದವನಂತೆ ವಿಶ್ವಾಸಭರಿತನಾಗಿ ಮುನ್ನಡೆಯುತ್ತಾನೆ. ಆ ತಂತಿಯನ್ನು ಹಿಂಬಾಲಿಸುತ್ತ ಸಾಗಿದಂತೆ ತನ್ನ ಅಪಾರ್ಟ್ಮೆಂಟಿನಿಂದಲೂ ಆತ ದೂರವಾಗುತ್ತ ಹೋಗುತ್ತಾನೆ. ಇಷ್ಟರಲ್ಲಿ ಧೋ ಎಂದು ಮಳೆ ಬರಲು ಶುರುವಾಗಿ ಅಷ್ಟಿಷ್ಟು ಉರಿಯುತ್ತಿದ್ದ ಬೀದಿದೀಪಗಳು ವಿದ್ಯುತ್ ಕಳೆದುಕೊಂಡು ಕತ್ತಲಲ್ಲಿ ನಿಲ್ಲುತ್ತವೆ. ಜೋರಾಗಿ ಸುರಿದ ಮಳೆಗೆ ಆಗಲೇ ನೆಂದುಹೋಗಿದ್ದ ವಿಶಾಲ್ ಆ ಮಳೆಯಲ್ಲೇ ಮುಂದುವರೆಯಲು ನಿರ್ಧರಿಸುತ್ತಾನೆ. ಆ ಕತ್ತಲೆಯಲ್ಲಿ ಮುಂದಿನ ದಾರಿ ತೋರಲು ಆ ತಂತಿಯೊಂದೇ ದಾರಿ. ಹಿಡಿದು ಸಾಗುತ್ತ ಆ ತಂತಿ ಸ್ವಲ್ಪ ದೂರದಲ್ಲಿ ಒಂದು ಬಿದಿರಿನ ಕಣದೊಳಕ್ಕೆ ಹೋದಂತೆ ಅಸ್ಪಷ್ಟವಾಗಿ ಕಂಡಿತು. ಮತ್ತೆ ಮುಂದುವರೆದು ಕಣದೊಳಗೆ ಹೋಗುತ್ತಾನೆ. ತಂತಿ ಹೋದ ದಾರಿಯಿಂದಲೇ ಮೆಲ್ಲಗೆ ಏನೋ ಶಬ್ದ ಕೇಳಿಸುತ್ತಿರುವಂತೆ ಭಾಸವಾಗುತ್ತದೆ. ಮತ್ತೆ ಅದನ್ನು ಹಿಡಿದು ಸಾಗುತ್ತಿದ್ದಂತೆ ಆ ಶಬ್ದ ದೊಡ್ಡದಾಗುತ್ತ ಫೋನು ತಿಂಗಣಿಸುತ್ತಿರುವಂತೆ ಕೇಳುತ್ತದೆ. ಈಗ ಕುತೂಹಲ ತಾಳಲಾರದೆ ವಿಶಾಲ್ ದಾಪುಗಾಲಿಡುತ್ತ ಆ ಶಬ್ದದ ಹತ್ತಿರಕ್ಕೆ ಹೋದಾಗ ಎದೆ ಬಡಿತವೇ ನಿಂತಂತಾಗುತ್ತದೆ. ತನ್ನ ಮನೆಯಲ್ಲಿ ಇದ್ದ ಅದೇ ಫೋನು ಈಗ ಅಕ್ಷರಶಃ ಕಾಡಿನಂತ ಬಿದಿರಿನ ಕಣದ ಮಧ್ಯದಲ್ಲಿ ರಿಂಗಣಿಸುತ್ತದೆ. ತನಗರಿವಿಲ್ಲದಂತೆ ನಡುಗುತ್ತಿದ್ದ ಕೈಯಿಂದ ಮೆಲ್ಲಗೆ ಫೋನನ್ನು ಎತ್ತಿ ಹಲೋ ಎನ್ನುತ್ತಾನೆ. ಆ ಧ್ವನಿ, "ಹಲೋ ವಿಶಾಲ್. ನೀ ಬಂದೆಬರುವೆ ಎಂಬ ನಂಬಿಕೆ ನನಗಿತ್ತು. ನನ್ನನ್ನು ಹೀಗೆ ಒಬ್ಬಳೇ ಹೋಗಲು ಬಿಡಿವುದಿಲ್ಲ ಎಂದು ನನಗೆ ಗೊತ್ತಿತ್ತು. ಇನ್ನು ಇಬ್ಬರೂ ಜೊತೆಯಾಗಿ ಇರಲು ಯಾವ ಅಡ್ಡಿಯೂ ಇಲ್ಲ." ಎಂದಾಗ ವಿಶಾಲ್ ಸ್ಥಬ್ಧವಾಗುತ್ತಾನೆ. ತನ್ನ ದೇಹವನ್ನು ತಾನೇ ಬಿಟ್ಟುಹೋಗುತ್ತಿರುವಂಥ ಅನುಭವ. ಕಿರುಚಲು ಕೂಗಲೂ ಅವಕಾಶವಿಲ್ಲದಂತೆ ಯಾವುದೋ ಶಕ್ತಿ ತನ್ನ ಧ್ವನಿಯನ್ನು ಉಡುಗಿಸಿಟ್ಟಿರುವಂತೆ ಅನ್ನಿಸಿತು. ಆದರೂ ನಿಧಾನವಾಗಿ ಧೈರ್ಯ ತಂದುಕೊಂಡು ಮೈ ತಡವಿಕೊಂಡು ಅಲ್ಲಿಂದ ಮೊದಲು ಹೊರಹೋಗಿಬಿಡುವ ಎಂದು ಯೋಚಿಸಿ ಸುತ್ತಲೂ ನೋಡುತ್ತಾನೆ. ಗುಡುಗು ಮಿಂಚಿನ ಬೆಳಕಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಬಿದಿರೇ. ಅದರಾಚೆಗೆ ಏನಿದೆ ಎಂದೂ ಕಾಣದಷ್ಟು. ಆದರೂ ಧೃತಿಗೆಡದೆ ತಂತಿ ಹಿಡಿದು ಹೇಗೆ ಇಲ್ಲಿಗೆ ಬಂದೇನೊ ಹಾಗೆ ಇಲ್ಲಿಂದ ಹೊರ ಹೋಗೋಣ ಎಂದು ಯೋಚಿಸಿದ. ಮೆಲ್ಲಗೆ ತಂತಿ ಹಿಡಿದು ಬಂದ ದಾರಿಯಲ್ಲೇ ಮರಳಿ ಹೆಜ್ಜೆ ಹಾಕತೊಡಗಿದ. ಆದರೆ ಹತ್ತು ಹೆಜ್ಜೆ ಹಾಕುವಷ್ಟರಲ್ಲಿ ಕೈಲಿದ್ದ ತಂತಿ ಮುಗಿದುಹೋಗುತ್ತದೆ. ವಿಶಾಲ್ ನೆಲಕ್ಕೆ ಬಗ್ಗಿ ಹರಿದ ತಂತಿಯ ಮುಂದುವರೆದ ಭಾಗವೇನಾದರೂ ಸಿಗುತ್ತದ ಎಂದು ಕೈಯಾಡಿಸಿ ನೋಡುತ್ತಾನೆ. ಊಹೂಂ, ಏನೂ ಇಲ್ಲ. ಅಷ್ಟರಲ್ಲಿ ಅಲ್ಲಿಯ ತನಕ ಸುರಿಯುತ್ತಿದ್ದ ಮಳೆಯೂ ನಿಲ್ಲುತ್ತದೆ. ಈಗ ಸುತ್ತಲೂ ಮೌನವಲ್ಲದೆ ಬೇರೇನೂ ಕೇಳದು. ಅಂಧಕೂಪದಲ್ಲಿ ಸಿಲುಕಿ ಒದ್ದಾಡುವ ಆತ್ಮದಂತೆ ದಾರಿ ಸಿಗದೆ ವಿಶಾಲ್ ಭಯದಿಂದ ಅತ್ತಿತ್ತ ಅಲೆದು ಹೊರಕ್ಕೆ ಹೋಗಲು ದಾರಿಗಾಗಿ ಹುಡುಕಾಡುತ್ತಾನೆ. ಅಲೆದು ಅಲೆದು ಸುಸ್ತಾಗಿ ಅಳುತ್ತ ಅಲ್ಲೇ ಕುಸಿಯುತ್ತಾನೆ. ಆದ ಆಘಾತದಿಂದ ಸುಸ್ತಾಗಿ ಅಳು ನಿಂತು ಅಲ್ಲೇ ನಿದ್ರಿಸುತ್ತಾನೆ. 

  ಬೆಳಕು ಹರಿದು ಬಿದಿರಿನ ಕಣವನ್ನು ಸೀಳಿ ವಿಶಾಲ್ ಮುಖದ ಮೇಲೆ ಬಡಿಯುತ್ತಿದ್ದಂತೆ, ವಿಶಾಲ್ ಗೆ ಮೆಲ್ಲಗೆ ಎಚ್ಚರವಾಗುತ್ತದೆ. ಕೆಟ್ಟ ಕನಸೊಂದನ್ನು ಕಂಡೆನೇನೋ ಎಂದಂದುಕೊಂಡು ಕಣ್ಬಿಟ್ಟು ನೋಡಿದಾಗ ಹಿಂದಿನ ರಾತ್ರಿ ನಡೆದಿದ್ದೆಲ್ಲ ಸತ್ಯ ಎಂದು ಅರಿವಾಗಿ ಮತ್ತೆ ಅಳುತ್ತಾನೆ. ಸಾವರಿಸಿಕೊಂಡು ಎದ್ದು ಸುತ್ತ ಎಲ್ಲಿ ನೋಡಿದರೂ ನೆನ್ನೆ ನೋಡಿದ ಫೋನು ಮಾತ್ರ ಪತ್ತೆ ಇಲ್ಲ. ಆದರೆ ಬಿದಿರಿನ ಕಣದಿಂದ ಹೊರಬರಲು ನೆನ್ನೆ ಕಷ್ಟವಾದಷ್ಟು ಈಗ ಕಷ್ಟವೇನೂ ಆಗಲಿಲ್ಲ. ಬಿದಿರಿನ ಕಣಗಳ ಮಧ್ಯದಿಂದ ಹೊರಗಿನ ಲೋಕ ಕಾಣುತ್ತಿದ್ದಂತೆ ವಿಶಾಲ್ ಅಲ್ಲಿಂದ ಹೊರಬರುತ್ತಾನೆ. ಬಂದು ನೋಡಿದರೆ ಈ ಕಣ ತನ್ನ ಅಪಾರ್ಟ್ಮೆಂಟಿನ ಹಿಂಭಾಗದಲ್ಲೇ ಸ್ವಲ್ಪ ದೂರಮಾತ್ರದಲ್ಲೇ ಇದೆ. ಆದರೆ ಕತ್ತಲಿನ ಕಾರಣ ನೆನ್ನೆ ಹೊರಬರಲು ಎಷ್ಟು ಕಷ್ಟಪಟ್ಟೆನಲ್ಲ ಎಂದು ದುಃಖಿತನಾಗುತ್ತಾನೆ. ಇಷ್ಟೆಲ್ಲ ಆಗುವುದರಲ್ಲಿ ತನ್ನ ಬಟ್ಟೆ ಕೇಸರಾಗಿರುವುದನ್ನು ಆತ ಗಮನಿಸಿಯೇ ಇರಲಿಲ್ಲ. ಬೀದಿ ನಾಯಿಗಳು ಇವನನ್ನು ನೋಡಿ ಬೊಗಳುತ್ತಿದ್ದುದನ್ನು ನೋಡಿ ತಿಳಿದುಕೊಂಡ. ಹಾಗೆ ನಡೆದು ಅಪಾರ್ಟ್ಮೆಂಟನ್ನು ಸೇರಿಕೊಂಡು ಸ್ನಾನ ಮಾಡಿ ಬಟ್ಟೆ ಬದಲಾಯಿಸುತ್ತಾನೆ. ಕಚೇರಿಗೆ ಹೋಗುವ ಬಗ್ಗೆ ಯೋಚನೆಯೂ ಮಾಡದೆ ತನ್ನ ಫೋನು ತೆಗೆದುಕೊಂಡು ಕಾಶಿಯ ಮನೆಗೆ ಓಡುತ್ತಾನೆ. ಕೆಲಸದ ದಿನವಾದ್ದರಿಂದ ಕಾಶಿ ಮನೆಯಲ್ಲಿರದೆ ಆತನ ಹೆಂಡತಿ ನಂದಿನಿ ಮಾತ್ರ ಮನೆಯಲ್ಲಿರುತ್ತಾಳೆ. ಹಠಾತ್ತನೆ ಮನೆಗೆ ಬಂದ ವಿಶಾಲ್ ನನ್ನು ನೋಡಿ ಆಶ್ಚರ್ಯವಾದರೂ ಆತನ ಕಳೆಹೀನ ಮುಖ ನೋಡಿ ಏನೋ ಆಗಿದೆ ಎಂದು ಯೋಚಿಸಿ ಅವನನ್ನು ಒಳಗೆ ಕರೆಯುತ್ತಾಳೆ. ಏನಾಯಿತು ಎಂದು ಆಕೆ ಕೇಳುವಷ್ಟರಲ್ಲೇ ವಿಶಾಲ್ ಅಲ್ಲಿಯ ತನಕ ನಡೆದ್ದನ್ನೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಅಕೆಗೆ ಗಾಬರಿಯಾಗಿ ಕಾಶಿಗೆ ಫೋನ್ ಮಾಡಿ ಚುಟುಕಾಗಿ ನಡೆದ್ದನ್ನೆಲ್ಲ ತಿಳಿಸಿ ಕಚೇರಿಯಿಂದ ರಜಾ ಪಡೆದು ಬರಲು ಸಾಧ್ಯವಾದರೆ ಬರಲು ಕೇಳುತ್ತಾಳೆ. ಕಾಶಿ ಆಕೆಗೆ ವಿಶಾಲ್ ನನ್ನು ತಾನು ಬರುವವರೆಗೂ ಜಾಗ್ರತೆಯಾಗಿ ನೋಡಿಕೊಳ್ಳಲು ಹೇಳುತ್ತಾನೆ. ನಂದಿನಿ ಹೆಚ್ಚು ವಿಶಾಲ್ ನನ್ನು ಇದರ ಬಗ್ಗೆ ಕೆದಕದೆ ಊಟ ಕೊಟ್ಟು ಮಲಗಲು ಕೋಣೆಯಲ್ಲಿ ವ್ಯವಸ್ಥೆ ಮಾಡಿಕೊಡುತ್ತಾಳೆ. ವಿಶಾಲ್ ಆಕೆ ಹೇಳಿದಂತೆ ಉಂಡು ಕೋಣೆಯಲ್ಲಿ ಮಲಗಿ ನಿದ್ರಿಸುತ್ತಾನೆ. ಆದರೆ ವಿಶಾಲ್ ನಿದ್ದೆಯಲ್ಲೂ ಆಗಾಗ ಬೆಚ್ಚುವುದನ್ನು ನೋಡಿ ನಂದಿನಿಗೆ ಬಹಳ ಬೇಸರವಾಗುತ್ತದೆ. ಸದಾ ಉತ್ಸಾಹದ ಚಿಲುಮೆಯಂತಿದ್ದ ವಿಶಾಲ್ ಹೀಗೆ ಉತ್ಸಾಹದ ಚಿಹ್ನೆಯೂ ಇಲ್ಲದವನಂತೆ ಕಂಡು ತಾಯಿಯನ್ನು ಕಳೆದುಕೊಂಡು ಅನಾಥನಾದವನಿಗೆ ಹೀಗಾಗಬಾರದಿತ್ತು ಎಂದು ನೊಂದುಕೊಳ್ಳುತ್ತಾಳೆ. 

  ಸಂಜೆಗೆ ಎಚ್ಚರಾಗುವ ವಿಶಾಲ್ ಎದ್ದು ಬಂದಾಗ ಹಾಲಿನಲ್ಲಿ ಕಾಫಿ ಕುಡಿಯುತ್ತ ಕೂತಿದ್ದ ಕಾಶಿ ನಂದಿನಿಗೆ ಇನ್ನೊಂದು ಕಾಫಿ ಕೊಡಲು ಹೇಳುತ್ತಾನೆ. "ಏನಯ್ಯ ನಿದ್ದೆಯಾಯ್ತಾ? ಇವತ್ತೇನು ಏಳುತ್ತೀಯೋ ಇಲ್ವೋ ಅಂತ ಮಾಡಿದ್ದೆ." ಎಂದು ಕಾಶಿ ಹೇಳುತ್ತಿದ್ದಂತೆ, ವಿಶಾಲ್ ದುಃಖಿತನಾಗಿ ಸೋಫಾದ ಮೇಲೆ ಕುಸಿದುಬೀಳುತ್ತಾನೆ. "ಹೇ, ಸಮಾಧಾನ ಮಾಡಿಕೊಳ್ಳೋ. ಸುಮ್ಮನೆ ತಮಾಷೆ ಮಾಡಿದೆ. ನಂದಿನಿ ಎಲ್ಲ ಹೇಳಿದ್ದಾಳೆ. ನೀ ಅದರ ಬಗ್ಗೆ ಯೋಚನೆ ಬಿಡು ಈಗ. ನಿನ್ನ ಜೊತೆ ನಾವಿದ್ದೇವಲ್ಲ." ಕಾಫಿ ತಂದುಕೊಡುವ ನಂದಿನಿ ಏನೂ ಹೇಳಲಾಗದೆ ಸುಮ್ಮನೆ ಕಾಫಿ ಕೈಗಿತ್ತು ನೋಡುತ್ತಾ ನಿಲ್ಲುತ್ತಾಳೆ. ವಿಶಾಲ್ ಇನ್ನು ಸ್ವಲ್ಪ ದಿನ ಇಲ್ಲೇ ಇರಲಿ ಎಂದು ದಂಪತಿಗಳು ನಿರ್ಧರಿಸಿ ಕಾಶಿ ವಿಶಾಲ್ ನ ಕಚೇರಿಗೆ ಫೋನ್ ಮಾಡಿ ಆತನಿಗೆ ಹುಷಾರಿಲ್ಲವೆಂದೂ ಸ್ವಲ್ಪ ದಿನದ ಬಳಿಕ ಬರುವುದಾಗಿಯೂ ವಿಶಾಲ್ ನ ಪರವಾಗಿ ರಜಾ ಪಡೆಯುತ್ತಾನೆ. ಸ್ವಲ್ಪ ದಿನ ಕಳೆದಂತೆ ವಿಶಾಲ್ ಗೆ ನಡೆದದ್ದೆಲ್ಲ ಸ್ವಲ್ಪ ಮರೆತಂತಾಗಿ ಕಾಶಿಯ ಜೊತೆ ಅದರ ಬಗ್ಗೆ ಮಾತಾಡಲು ಪ್ರಾರಂಭಿಸುತ್ತಾನೆ. 
"ಯಾರಿರಬಹುದು ಆಕೆ?" ಕಾಶಿ ಕೇಳುತ್ತಾನೆ.
"ಗೊತ್ತಿಲ್ಲ."
"ನಿನ್ನ ಹಳೆ ಗರ್ಲ್ ಫ್ರೆಂಡ್ ಯಾರಾದ್ರೂ?"
"ಹಾಗೆ ಯಾರೂ ಇಲ್ಲ. ನಿನಗೇ ಗೊತ್ತಲ್ಲ. ನಾನಾಯ್ತು ನನ್ನ ಕೆಲಸವಾಯ್ತು ಅಂತ ಇರೋನು ನಾನು."
"ಮತ್ತೆ ಯಾರ ಜೊತೆಗಾದರೂ ಜಗಳ, ದ್ವೇಷ ಏನಾದ್ರು?"
"ಈ ಊರಲ್ಲಿ ನಂಗ್ಯಾರು ಗೊತ್ತಪ್ಪ? ಇನ್ನು ಹಳೆ ಊರಲ್ಲಿ ಯಾರೊಟ್ಟಿಗೂ ಜಗಳವಾಗಲಿ ದ್ವೇಷವಾಗಲಿ ಇರಲಿಲ್ಲ."
"ಮತ್ತೆ ನಿನ್ನ ಹೆಸರು ಅದು ಹೇಗೆ ಗೊತ್ತಾಯ್ತು ಆಕೆಗೆ ಅಂತ."
"ಅದೇ ನನಗೆ ಚಿಂತೆಯಾಗಿದ್ದು. ಬೇರೆ ಯಾರದ್ದೋ ಹೆಸರು ಹೇಳಿದ್ದರೆ, ರಾಂಗ್ ನಂಬರ್ ಎಂದು ಉದಾಸೀನ ಮಾಡಬಹುದಿತ್ತು. ಆದರಿಲ್ಲಿ ಹಾಗಾಗಿಲ್ಲ." 
"ಹ್ಞೂಂ. ಅದೇ ತಲೆ ಕೆಡಿಸ್ತಾ ಇರೋದು. ಸದ್ಯ ನಿನ್ನ ಮೊಬೈಲಿಗೆ ಹೀಗೆ ಕರೆ ಬಂದಿಲ್ಲವಲ್ಲ ಬಿಡು. ನೀ ಬದುಕಿದೆ." 
"ಸುಮ್ಮನೆ ಇರಯ್ಯ. ಇನ್ನೂ ಹೆದರಿಸಬೇಡ." ಎಂದು ಮೆಲ್ಲಗೆ ನಗುತ್ತಾನೆ. 
"ಒಮ್ಮೆ ಆ ಮನೆಗೆ ಹೋಗಿ ನಾನೇ ನೋಡಿ ಬರುತ್ತೇನೆ. ನೀ ಹೆದರಬೇಡ." ಎಂದು ಕಾಶಿ ಧೈರ್ಯ ಹೇಳುತ್ತಾನೆ. 

  ಮರುದಿನ ಭಾನುವಾರದ ದಿನ ಕಾಶಿ ವಿಶಾಲ್ ನ ಮನೆಗೆ ಹೋಗಿ ಮನೆಯೆಲ್ಲ ತನಗೆ ಸಮಾಧಾನವಾಗುವವರೆಗೂ ಪರೀಕ್ಷಿಸಿ ನೋಡುತ್ತಾನೆ. ಕುಳಿತು ಕಿಟಕಿಯನ್ನು ನೋಡುತ್ತಿರಬೇಕಾದರೆ, ಫೋನ್ ರಿಂಗಣಿಸುತ್ತದೆ. ಗಾಬರಿಯಾಗುವ ಕಾಶಿ ಧೈರ್ಯ ಕಳೆದುಕೊಳ್ಳದಿದ್ದರೂ ಅನುಮಾನದಿಂದಲೇ ಫೋನ್ ಎತ್ತಿ ಹಲೋ ಎನ್ನುತ್ತಾನೆ. 
"ಹಲೋ ಕಾಶಿ. ನೀ ಬಂದೆಬರುವೆ ಎಂಬ ನಂಬಿಕೆ ನನಗಿತ್ತು. ನನ್ನನ್ನು ಹೀಗೆ ಒಬ್ಬಳೇ ಹೋಗಲು ಬಿಡಿವುದಿಲ್ಲ ಎಂದು ನನಗೆ ಗೊತ್ತಿತ್ತು. ಇನ್ನು ಇಬ್ಬರೂ ಜೊತೆಯಾಗಿ ಇರಲು ಯಾವ ಅಡ್ಡಿಯೂ ಇಲ್ಲ." ಎಂದು ಆಕಡೆಯ ಹೆಣ್ಣು ಧ್ವನಿ ಹೇಳುತ್ತಲೇ ಕಾಶಿ ಫೋನು ಕುಕ್ಕಿ ಸತ್ತೆನೋ ಕೆಟ್ಟೆನೋ ಎಂದು ಬೀಗದ ಕೈ ಹಿಡಿದು ಮನೆಯಿಂದ ಹೊರಗೋಡಿ ಬಾಗಿಲನ್ನು ತರಾತುರಿಯಲ್ಲಿ ಹಾಕುತ್ತಾನೆ. ಇದನ್ನು ಗಮನಿಸಿದ ಪಕ್ಕದ ಮನೆಯ ಅಜ್ಜ, "ಯಾಕೆ ನೀವು ಬೀಗ ಹಾಕ್ತಿದ್ದೀರಿ? ನಿಮ್ಮ ಸ್ನೇಹಿತ ಎಲ್ಲಿ?" ಎಂದು ಕೇಳುತ್ತಾನೆ. "ಅವನಿಗೆ ಹುಷಾರಿಲ್ಲ ನನ್ನ ಮನೆಯಲ್ಲಿದ್ದಾನೆ. ಅವನ ಕೆಲವು ವಸ್ತುಗಳನ್ನ ತಗೊಂಡು ಹೋಗೋಣ ಅಂತ ಬಂದಿದ್ದೆ ಅಷ್ಟೇ." ಎಂದು ಕಾಶಿ ಉತ್ತರಿಸುತ್ತಾನೆ. ಅದಕ್ಕೆ ಆ ಅಜ್ಜ," ಹೌದೆ? ಏನೂ ತೊಂದರೆಯಿಲ್ಲ ತಾನೇ?" ಎಂದು ಕೇಳುತ್ತಾನೆ. "ಇಲ್ಲ." ಕಾಶಿ ಹೇಳುತ್ತಾನೆ. ಆದರೂ ಆ ಅಜ್ಜ ಕೇಳಿದ ಧಾಟಿ ಯಾಕೋ ವಿಚಿತ್ರ ಅನ್ನಿಸಿ ಕಾಶಿ ಆ ಅಜ್ಜನನ್ನು "ಯಾಕೆ ಹಾಗೆ ಕೇಳಿದಿರಿ?" ಅಂತ ಕೇಳುತ್ತಾನೆ. "ಮತ್ತಿನ್ನೇನಪ್ಪ? ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲವ ಅದು. ಏನಾದ್ರು ಆಯ್ತೇನೋ ಅಂತ ಕೇಳಿದೆ." ಇದನ್ನು ಕೇಳಿದ ಕಾಶಿ ದಂಗುಬಂದಿಡು ನಿಲ್ಲುತ್ತಾನೆ. ಪೂರ್ತಿ ವಿಷಯವೇನು ಎಂದು ತಿಳಿದುಕೊಂಡು ವಿಶಾಲ್ ಬಳಿಗೆ ಓಡುತ್ತಾನೆ. 

  ಕಾಶಿ ಮನೆಗೆ ತಲುಪಿ ನಂದಿನಿ ವಿಶಾಲ್ ಇಬ್ಬರು ಟಿವಿ ನೋಡುತ್ತಾ ಕುಳಿತಿರುವುದನ್ನು ಕಂಡು ಏನೂ ಹೇಳದೆ ಒಳಗೆ ಹೋಗಿ ಮುಖ ತೊಳೆದು ಸ್ವಚ್ಛವಾಗಿ ಬಂದು ಕೂರುತ್ತಾನೆ. ಹೆಂಡತಿಗೆ ಕಾಫಿ ಮಾಡಿಕೊಡಲು ಹೇಳಿ ಕಳಿಸುತ್ತಾನೆ. ಕಾಶಿ ಮುಖದಲ್ಲಿ ಇದ್ದ ಗಾಬರಿಯ ಕಳೆಯನ್ನು ಕಂಡು ಏನೋ ನಡೆದಿದೆ ಎಂದು ವಿಶಾಲ್ ಗೆ ಮನದಟ್ಟಾಗುತ್ತದೆ. ಏನು ನಡೆಯಿತು ಎಂದು ಕೇಳುವ ಧೈರ್ಯವೂ ಈಗವನಿಗಿಲ್ಲ. ಕಾಫಿ ಹಿಡಿದು ತಂಡ ನಂದಿನಿ ಇಬ್ಬರ ಪೆಚ್ಚು ಮೋರೆಗಳನ್ನು ಕಂಡು ಆಕೆಯೇ ವಿಷಯವೇನೆಂದು ಕೇಳುತ್ತಾಳೆ. ಬೆಳಗ್ಗೆ ಫೋನ್ ಬಂದು ಗಾಬರಿಯಿಂದ ಮನೆಯಿಂದ ಹೊರಗೆ ಬರುತ್ತಿದ್ದಾಗ ಸಿಕ್ಕ ಪಕ್ಕದ ಮನೆಯ ಅಜ್ಜ ಹೇಳಿದ ಕಥೆಯನ್ನು ಹೇಳುತ್ತಾನೆ. ಆ ಅಜ್ಜ ಹೇಳಿದಂತೆ, ವಿಶಾಲ್ ಇದ್ದ ಅಪಾರ್ಟ್ಮೆಂಟ್ ಕಟ್ಟಿಸಿ ಕೆಲವೇ ವರ್ಷಗಳಾಗಿತ್ತು. ಕಟ್ಟಿಸಿದ ಮೊದಲ ವರ್ಷದಲ್ಲೇ ಬಂದು ಸೇರಿಕೊಂಡವರಲ್ಲಿ ಆ ಅಜ್ಜನೂ ಒಬ್ಬನಂತೆ. ಆತನ ಮಕ್ಕಳು ವಿದೇಶದಲ್ಲಿದ್ದಾರೆಂದೂ ಅಲ್ಲಿಗೆ ಹೋಗಲಿಚ್ಛಿಸದ ಈತನಿಗಾಗಿ ಈ ಮನೆ ಕೊಂಡುಕೊಟ್ಟಿದ್ದಾರೆಂದೂ ಹೇಳಿದ. ಅಜ್ಜ ಬಂದ ವರ್ಷದಲ್ಲೇ ವಿಶಾಲ್ ಈಗಿದ್ದ ಮನೆಗೆ ಸ್ವಾತಿ ಎಂಬ ಹುಡುಗಿಯೂ ಸೇರಿಕೊಂಡಿದ್ದಳಂತೆ. ನೋಡಲು ಸುಂದರವಾಗಿದ್ದ ಆಕೆ ಪುಣೆಯ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗೇ ಸಂಪಾದಿಸುತ್ತಿದ್ದಳಂತೆ. ಆಕೆಯ ತಂದೆ ತಾಯಿ ಎಲ್ಲ ದೂರದ ಪಾಟ್ನಾದವರಂತೆ. ಆಕೆ ಬಂದ ಮೊದಲ ವರ್ಷ ಎಲ್ಲವೂ ಸಾಧಾರಣವಾಗಿತ್ತು. ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಯಾರನ್ನೋ ಪ್ರೀತಿಸುತ್ತಿದ್ದಳಂತೆ. ನಿಧಾನವಾಗಿ ಪ್ರೀತಿ ಮದುವೆಗೆ ದಾರಿಯಾಗುವುದು ಎಂಬ ನಿರೀಕ್ಷೆಯಲ್ಲಿದ್ದ ಆಕೆಗೆ ಆಕೆಯ ಪ್ರಿಯಕರ ಕೈ ಕೊಟ್ಟಿದ್ದ. ಈಗ ಆಕೆಯ ಪ್ರೀತಿ ಬೇಡವೆನಿಸಿ ಆಕೆಯಿಂದ ದೂರವಾಗಿದ್ದ. ಇದನ್ನು ತಡೆದುಕೊಳ್ಳಲಾಗದ ಸ್ವಾತಿ ಆತನ ನೆನಪಲ್ಲೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಕೆಲಸದಲ್ಲೂ ಈಗ ಹೆಚ್ಚು ಪ್ರಗತಿ ಕಾಣದೆ ವೃತ್ತಿ ಜೀವನದಲ್ಲೂ ಸೋಲುತ್ತಿದ್ದಳು. ಎಷ್ಟು ಪ್ರಯತ್ನಿಸಿದರೂ ಆತನ ನೆನಪು ಮರೆಸಲಾಗದೆ ಆತನನ್ನು ಪದೇ ಪದೇ ಹಿಂಬಾಲಿಸಿ ಮಾತಾಡಿಸಲು ಪ್ರಯತ್ನಿಸುತ್ತಿದ್ದಳಂತೆ. ಈ ಪ್ರಯತ್ನಗಳು ಜಗಳಕ್ಕೆ ತಿರುಗಿ ಕಂಪನಿಯವರು ಈಕೆಯನ್ನು ಕೆಲಸದಿಂದಲೇ ತೆಗೆದರಂತೆ. ಈಗ ಕೆಲಸವೂ ಹೋಗಿ ಮಾನಸಿಕ ಒತ್ತಡ ಇನ್ನೂ ಜಾಸ್ತಿಯಾಗಿ ಆಕೆ ಕೊನೆಯ ಬಾರಿಗೆ ಆತನಿಗೆ ತನ್ನ ಮನೆಯಿಂದ ಫೋನ್ ಮಾಡಿ ವಿದಾಯ ಹೇಳಿ ನೇಣಿಗೆ ಶರಣಾದಳಂತೆ. ಕೊನೆಯ ಘಳಿಗೆಯವರೆಗೂ ತನ್ನ ಪ್ರಿಯಕರ ಬರುವನೇನೋ ಎಂದು ಕಾದು ಕೊನೆಯುಸಿರೆಳೆದಳಂತೆ. ಈಗ ಆಕೆಯದೆ ಆತ್ಮ ಆ ಮನೆಗೆ ಬಂದ ಯುವಕರನ್ನು ತನ್ನ ಪ್ರಿಯಕರನೆಂದೇ ಭಾವಿಸಿ ಹೀಗೆ ಕರೆ ಮಾಡುತ್ತಾಳೆಂದು ಆ ಅಜ್ಜ ಹೇಳಿದ. "ಈ ಆತ್ಮದ ಬಗ್ಗೆ ಆ ಅಜ್ಜನಿಗೆ ಹೇಗೆ ತಿಳಿಯಿತಂತೆ?" ಕೇಳಿದ ವಿಶಾಲ್.
"ನೀನು ಬರುವ ಒಂದು ವರ್ಷದ ಮುಂಚೆಯಷ್ಟೇ ನಿನ್ನಂತೆಯೇ ಒಬ್ಬ ಯುವಕ ಈ ಮನೆ ಸೇರಿಕೊಂಡಿದ್ದನಂತೆ. ಆತನಿಗೂ ನಿನ್ನಂತೆಯೇ ಕರೆಗಳು ಬರುತ್ತಿದ್ದವಂತೆ. ನೀನು ಆ ಅಜ್ಜನಿಗೆ ಹೇಳಲಿಲ್ಲ. ಆತ ಹೇಳಿಕೊಂಡಿದ್ದ. ಅಷ್ಟೇ ನಿನಗೂ ಅವನಿಗೂ ವ್ಯತ್ಯಾಸ. ನಾ ನಿನ್ನ ಮನೆಗೆ ಬೀಗ ಹಾಕುತ್ತಿದ್ದಾಗ ತಾನೇ ಬಂದು ವಿಚಾರಿಸಿ ಇಷ್ಟೆಲ್ಲ ಹೇಳಿ ಹೋದ ಆ ಅಜ್ಜ." ಎಂದ ಕಾಶಿ. "ಈಗೇನು ಮಾಡುವುದು?" ಕೇಳಿದ ವಿಶಾಲ್. "ಮಾಡುವುದೇನಿದೆ? ಮನೆ ಖಾಲಿ ಮಾಡಿ ಬೇರೆ ಕಡೆ ಹೋಗೋದು. ನೀ ಯೋಚಿಸಬೇಡ. ನಮ್ಮ ಬೀದಿಯಲ್ಲೇ ಒಂದು ಮನೆ ಖಾಲಿಯಿದೆ. ವಿಚಾರಿಸಿ ನೋಡ್ತೀನಿ. ಸಿಕ್ಕರೆ ಇಲ್ಲಿಗೇ ಬಂದುಬಿಡುವೆಯಂತೆ. ಏನು?" 
"ಸರಿ. ಆದರೂ ಇದೆಲ್ಲ ನಂಬೋಕಾಗ್ತಿಲ್ಲ. ಇದೆಲ್ಲ ನಿಜ ಅಂತಿಯ?" 
"ನಿಜವೋ ಸುಳ್ಳೋ ಇನ್ನೊಂದು ದಿನ ತರ್ಕ ಮಾಡೋಣ. ತಿಳಿದುಕೊಂಡು ಈಗಾಗಬೇಕಿರುವುದಾದರೂ ಏನು? ಮೊದಲು ನಮ್ಮ ಬದುಕು ಸರಿಮಾಡಿಕೊಳ್ಳೋಣ. ನೀನು ಸ್ವಲ್ಪ ದಿನ ಇಲ್ಲಿಗೆ ಬಂದುಬಿಡು. ಬೇರೆ ಮನೆ ಸಿಕ್ಕ ಮೇಲೆ ಹೋಗುವೆಯಂತೆ."
"ಆಗಲಿ." ಎನ್ನುತ್ತಾ ವಿಶಾಲ್ ಏನೂ ತಿಳಿಯದಂತಾದರೂ ಒಂದು ಬಗೆಯ ಸಮಾಧಾನವಾದಂತಾಗಿ ಮೆಲ್ಲಗೆ ಕಾಫಿ ಹೀರುತ್ತಾನೆ. 
-ವಿಶ್ವನಾಥ್