ಬುಧವಾರ, ಜುಲೈ 11, 2012

ನನ್ನ ಅಮ್ಮ

ಕಂಗಳಲಿ ತುಂಬಿರುವ ಕನಸಿನಂತೆ,

ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.

ಹರಿವ ನದಿಯೊಳಗಿನಾ ಸುಳಿಗಳಂತೆ,

ನಿನ್ನ ಪ್ರೀತಿಯು ಎನಗೆ ಅನಂತೆ.



ಮುದುಡಿದಾ ಮಲ್ಲಿಗೆಯು ಅರಳುವಂತೆ,

ಸುಡುವ ಬಿಸಿಲೊಳಗೂ ನೆರಳಿನಂತೆ,

ಋತುಗಳಾ ಚಂಚಲತೆ ಮೀರಿನಿಂತೆ,

ನಿನ್ನ ಪ್ರೀತಿಗೆ ನಾ ಶರಣು ಎಂದಿನಂತೆ.



-ವಿಶ್ವನಾಥ್ . ಡಿ. ಎ

ನಾನು ಮತ್ತು ಅಲಿಫ್ ಲೈಲಾ

ಇದು ನಾನು ಒಂದು ಎಂಟು ಹತ್ತು ವರ್ಷದವನಿದ್ದಾಗ ದಾವಣಗೆರೆಯಲ್ಲಿ ನನ್ನ ಅಜ್ಜಿಯ ಮನೆಯಲ್ಲಿ ನಡೆದ ಘಟನೆ. ನನ್ನ ಗೆಳೆಯ ಮುತ್ತು(ಮೃತ್ಯುಂಜಯ), ನನ್ನ ಮನೆಯಿಂದ ಹೊರ ಬರಲು ಹೇಳಿದ. ಸಂಜೆ ಏಳಾಗಿದ್ದಿರಬಹುದು. ಈಗ ಯಾವ ಆಟಕ್ಕೆ ಕರಿಯುತ್ತಾನಿವನು ಎಂದು ಹೊರಬಂದು,” ಏನ್ಲೇ?” ಎಂದೆ. “ ಬಾರ್ಲೆ ಹೇಳ್ತನಿ.” ಎಂದು ನನ್ನ ಮನೆಯಿಂದ ಒಂದು ಹತ್ತು ಅಡಿ ದೂರ ಕರೆದೊಯ್ದ. “ಲೇ ಅಲಿಫ್ ಲೈಲಾ ನೋಡಿಯೇನ್ಲೇ?” ಎಂದ.
ನಾನು “ ಏನ್ಲೇ ಹಂಗಂದ್ರೆ?” ಎಂದೆ.
“ಏ ಅಷ್ಟೂ ಗೊತ್ತಿಲೇನ್ಲೇ?ಅದು ಬೆಂಕಿನಾಗೆ ಮ್ಯಾಜಿಕ್ ಮಾಡೋದು.” ಅಂದ.
“ಅದೆಂಥದಲೇ ನಿನ್ನ ಮ್ಯಾಜಿಕ್ಕು. ತೋರ್ಸು ನೋಡನ.”
“ಸರಿ ಹಂಗಂದ್ರೆ, ಬೇಗ ಒಂದು ಬಾಟ್ಲಿ ಮುಚ್ಚುಳ, ಸಲ್ಪ ಮೇಣ, ಒಂದು ಕಡ್ಡಿಪೆಟ್ಟಿಗಿ ತಾ.”
“ಯಾಕೇಳು. ಕಡ್ಡಿಪೆಟಿಗಿ ತಂದ್ರೆ ನಮ್ಮ ಮನ್ಯಾಗ್  ಬೈತಾರ್ಲೆ. ನೀನೆ ತಂಬಾ.”
“ಹೋಗಲೇ, ತರಂಗಿದ್ರೆ ತಾ, ಇಲ್ಲಾಂದ್ರೆ ಬಿಡು.” ಎಂದ. ಕುತೂಹಲ ಬಿಟ್ಟೀತೆ. ಮೆಲ್ಲಗೆ ಮನೆಯೊಳಗೆ ಹೋಗಿ ಕಡ್ಡಿಪೆಟ್ಟಗೆ ಮತ್ತು ಮೇಣದಬತ್ತಿಯ ಸುತ್ತಲ ಕರಗಿದ ಮೇಣ, ಹಳೇ ಚೆಸ್ಟ್ರಾನ್ ಬಾಟಲ ಬೂಚು ಆರಿಸಿ ತಂದೆ.
“ಹ್ಞೂ ತೋರ್ಸಪ ಹೆಂಗೆ ಮಾಡೋದು?” ಎಂದು ನಮ್ಮ ಎಮ್ಮೆ ಕಟ್ಟುತಿದ್ದ ಜಾಗದ ಬಳಿ ಬಂದೆವು. ಆ ಜಾಗಕ್ಕೆ ಎರಡು ಕಡೆ ಮಾಮೂಲು ಗೋಡೆಯಿದ್ದರೆ, ಇನ್ನೆರಡು ಕಡೆ ತೆಂಗಿನ ಗರಿಯಿಂದ ಮಾಡಿದ ಗೋಡೆ. ಅದಾಗಲೇ ಕಟ್ಟಿ ವರ್ಷವಾಗುತ್ತ ಬಂದಿರಬೇಕು. ಗರಿಗಳೆಲ್ಲ ತುಂಬ ಒಣಗಿದ್ದವು. ತೀರ ಅದಕ್ಕೆ ಹತ್ತಿರವೇನು ನಾವು ಇದ್ದಿರಲಿಲ್ಲ. ಒಂದು ಹತ್ತು ಅಡಿ ದೂರದಲ್ಲಿ ನಿಂತಿದ್ದೆವು.
“ತಡಿಯಲೇ. ಮೊದ್ಲು ಮೂರು ಕಲ್ಲು ತರನ ತಡಿ, ಈ ಬೂಚು ನಿಲ್ಲಿಸ್ಬೇಕಲ್ಲ.” ಎಂದು ಮೂರು ಸರಿಯಾದ ಕಲ್ಲುಗಳನ್ನು ಹುಡುಕುತ್ತ, ನನಗೆ ಹುಲ್ಲು, ಕಡ್ಡಿ ಆರಿಸಲು ಹೇಳಿದ. “ಕೊಟ್ಟಿಗೆಯಲ್ಲೇ ಇರುತ್ತಲ್ಲ ಹುಲ್ಲು,ಅದನ್ಯಾಕೆ ಹುಡುಕಬೇಕು” ಅಂತ ಕೇಳ್ತೀರ?ಅವತ್ತು ಯಾರ ಅದೃಷ್ಟಕ್ಕೋ, ಅಲ್ಲಿ ಒಣ ಹುಲ್ಲು ಇನ್ನೂ ಒಟ್ಟಿರಲಿಲ್ಲ.
ಸರಿ ನಮ್ಮ ಹುಡುಕಾಟ ಮುಗಿದು, ಕಲ್ಲು ಜೋಡಿಸಿ, ಬೂಚು ಅದರ ಮೇಲಿಟ್ಟು ತಯಾರಾದೆವು. ಅದರ ಕೆಳಗೆ ಸ್ವಲ್ಪ ಒಣ ಹುಲ್ಲು ಇಟ್ಟೆವು. ಅಷ್ಟರಲ್ಲಿ ಮತ್ತೆ ನೆನಪಿಸಿಕೊಂಡು, ಸ್ವಲ್ಪ ನೀರು ತರಲು ಹೇಳಿದ;ತಂದೆ. ಮೇಣ ಅದರಲ್ಲಿಟ್ಟು, ಬೆಂಕಿ ಇನ್ನೇನು ಹಚ್ಚಬೇಕು ಅನ್ನುವಷ್ಟರಲ್ಲಿದ್ದೆವು. ನನಗೋ ಇವನು ಅಷ್ಟು ಹೇಳಿದ ಅಲಿಫ್ ಲೈಲಾ ಹ್ಯಾಗಿದ್ದಾಳೋ ಎಂದು ನೋಡುವ ಕಾತುರ.
ಆಗಬೇಕಾಗಿದ್ದುದು ಇಷ್ಟು. ಬೂಚಿನಲ್ಲಿ ಮೇಣ ಇಟ್ಟು, ಕೆಳಗಿನಿಂದ ಕಾಯಿಸಿದಾಗ, ಮೇಣ ಕರಗುತ್ತದೆ. ಹೌದೇ? ಈಗ ಹಾಗೆ ಕರಗಿದ ಮೇಣದ ಸುತ್ತ ಬೆಂಕಿ ಆವರಿಸಿಕೊಳ್ಳುತ್ತಿರುವಾಗ, ಕೊಂಚ ನೀರು ಚಿಮುಕಿಸಿದರೆ, ಇಷ್ಟಿದ್ದ ಬೆಂಕಿ ದೊಡ್ಡದಾಗಿ ಏಳುತ್ತದೆ.ಈಗ ಸರ್ಕಸ್ ನಲ್ಲಿ ವಿದೂಷಕರು ಕೈಯಲ್ಲಿ ಚಿಕ್ಕ ಪಂಜು ಹಿಡಿದು, ಬಾಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆ ಬೆಂಕಿಯ ಮೇಲೆ ಉಗುಳಿದಾಗ ಬೆಂಕಿ ಧಗ್ಗೆಂದು ಏಳುತ್ತಲ್ಲ , ಹಾಗೆಯೆ ಇಲ್ಲು ಆಗುತ್ತದೆ.
ಆದರೆ ಆದದ್ದೇನು? ಇನ್ನೇನು ಇಬ್ಬರೂ ಬೆಂಕಿ ಹಚ್ಚಬೇಕು, ನನ್ನ ಕಿವಿಯ ಮೇಲೆ ರಪ್ಪೆಂದು ಒಂದು ಏಟು ಬಿತ್ತು. ಏನಾಯಿತು ಎಂದು ನೋಟುವಷ್ಟರಲ್ಲಿ ನನ್ನ ಮಾವ,” ನೆರಿಕೀಗೆ ಬೆಂಕಿ ಹಚ್ಚಕತಿರೇನ್ರಲೇ?” ಎಂದು ಇಬ್ಬರನ್ನೂ ಹೊಡೆದು ಓಡಿಸಿದರು. ಇನ್ನು ಈ ಆರ್ಭಟದಲ್ಲಿ ನಮ್ಮ ಅಲಿಫ್ ಲೈಲಾಳ ಬಗ್ಗೆ ಅವರಿಗೆ ಹೇಳಲಾದೀತೆ? ಅಂತು ನನಗೆ ಅಲಿಫ್ ಲೈಲಾ ನೋಡುವ ಭಾಗ್ಯ ಇಲ್ಲದಂತಾಯಿತು. ಅದಾದ ಮೇಲೆ ಎಷ್ಟೋ ಸಾರಿ ಮತ್ತೆ ಅದನ್ನೇಕೆ ಮಾಡಬಾರದು ಎಂದೆನಿಸಿದ್ದಿದೆ. ಬಹುಶಃ ಅಂದು ಕಾಣಬೇಕಾಗಿದ್ದ ಅಲಿಫ್ ಲೈಲಾಳೇ ಬರುವಳೋ ಇಲ್ಲವೋ ಅನ್ನುವ ಅನುಮಾನವಿದ್ದಿರಬೇಕು.

-ವಿಶ್ವನಾಥ್.ಡಿ.ಎ

ಕನ್ನಡಿಯೊಳಗಿನ ಬದುಕು

ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಚಂದ,
ಲೋಕದೊಳತಿ ಸುಂದರನು ನಾನೇ.
ಕನ್ನಡಿಯೊಳಗಲ್ಲದೆ ಬೇರಲ್ಲೂ ಕಾಣದ,
ನನ್ನ ಮುಖ ನೋಡಿ ಹಿಗ್ಗಿದ್ದೆ.
 
ಮರಣದಂಚಿನಲ್ಲಿದ್ದ ಅಪ್ಪ,
ಮೂರು ನಿಮಿಷವಾದರೂ ಹೆಚ್ಚು ಬದುಕಲೆಂದು,
ಲಕ್ಷ ಖರ್ಚು ಮಾಡಿದ್ದೆ.
ಅಪ್ಪನ ಮೇಲೆ ನಾ ತೋರಿದ ಪ್ರೀತಿಗೆ ಮೆಚ್ಚಿ,
ನನ್ನ ನಾ ಹೊಗಳಿಕೊಂಡಿದ್ದೆ.
 
ಹಳೆಯಮನೆಯಲಿ ಅಮ್ಮ,
ಒಬ್ಬಳಿರಲೇಕೆಂದು ಹೇಳಿ,
ನನ್ನ ಮನೆಗೇ ಕರೆತಂದಿದ್ದೆ.
ಮುಪ್ಪಿನ ಕಾಲದಲಿ ಒಂಟಿ ತಾ ಎಂದೆನಿಸದೆ,
ಮೊಮ್ಮಕ್ಕಳೊಡನಾಡಿಕೊಂಡಿರಲೆಂದು ಕರೆತಂದಿದ್ದೆ.
 
ಲಕ್ಷವದು ಖರ್ಚುಮಾಡಿದ್ದು ಪ್ರೀತಿಗಲ್ಲ,
ಇನ್ನಾದರೂ ಆಸ್ತಿ ಕೊಡುವನೇನೋ ಎಂದು.
ಆಕೆಯನು ತಂದದ್ದು ತಾಯಿಯ ಪ್ರೀತಿಗಲ್ಲ,
ಮನೆಯ ಕೆಲಸದಲಿ ನನ್ನಾಕೆಯೊಡನಿರಲೆಂದು.
ಕ್ರೌರ್ಯ, ಸ್ವಾರ್ಥ, ಲೋಭ ಇವ್ಯಾವೂ
ಕಾಣಲೇ ಇಲ್ಲ ಈ ಕನ್ನಡಿಯಲ್ಲಿ.
 
ಕನ್ನಡಿಯಲಿ ಕಂಡದ್ದು,
ಕಂಡು ನಾ ಮೆಚ್ಚಿದ್ದು,
ನಾನಲ್ಲದ ನನ್ನನ್ನು,
ಮಾನವತೆಯ ಮುಗ್ಧ ನಗೆ ನಕ್ಕಿ,
ನನ್ನನ್ನೇ ನೋಡುತಿದ್ದ ಮುಖವಿದ್ದ,
ಕನ್ನಡಿಯೊಳಗಿನ ಬದುಕನ್ನು.
-ವಿಶ್ವನಾಥ್.ಡಿ.ಎ

ಒಮ್ಮೆ ನಕ್ಕುಬಿಡು...


ಒಮ್ಮೆ ನಕ್ಕುಬಿಡು,
 
ಮನದ ಭಾರ ಕಳೆದು,
ನಾಳೆ ಮತ್ತೆ ಹೊಸ
ಬೆಳಕು ಮೂಡುವ
ಕನಸ ಕಟ್ಟಿ ನಡೆದು.


ಭರವಸೆಯ ಮೂಡಿಸು,
ಬತ್ತಿ ಹೋದ ಕಣ್ಣಲ್ಲಿ,
ಆಸೆಯ ಅರಳಿಸು,
ಮುದುಡಿದಾ ಬದುಕಲ್ಲಿ,
ನಿಂತ ಜಗಕೆ, ಜಗದಾ ಜಡತೆಗೆ
ಚಲನೆಯ ಮರಳಿಸು.


ಹಸಿವನು ಹೊತ್ತಿಸು,
ಜ್ಞಾನದ ಎಡೆಯಲ್ಲಿ,
ಕ್ರಾಂತಿಯ ಮೊಳಗಿಸು,
ಬೆಳವಣಿಗೆಯ ದಿಕ್ಕಿನಲ್ಲಿ,
ಹೂತ ಹೆಜ್ಜೆಗಳಿಗೊಂದು ಗಟ್ಟಿ
ನೆಲವನ್ನು ಕೊಟ್ಟು ನಡೆಸು.

- ವಿಶ್ವನಾಥ್.ಡಿ.ಎ

ಚಂದ್ರನೆಡೆಗಿನ ವಲಸಿಗರು

ಬೀದಿಯೆಲ್ಲಾ ಜನಗಳು
ಒಬ್ಬಂಟಿಗಳು,
ಇಬ್ಬದಿಯಲ್ಲೂ ಮನೆಗಳು
ಖಾಲಿ ಮನಗಳು,
ಗುಡಿಯ ತುಂಬ ಭಜನೆಗಳು
ಕಿವುಡು ಕಿವಿಗಳು,
ಹೊರಟಿಹರು ಚಂದ್ರನೆಡೆಗೆ ವಲಸಿಗರು.


ದುಃಖ ತಪ್ತ ಕಂಗಳು
ನೀರಾಡವು,
ಹಣ ತುಂಬಿದ ಕೈಗಳು
ಸಾಲದವು,
ಕತ್ತಲು ತುಂಬಿದ ರಾತ್ರಿಗಳು
ಬೆಳಗುವವು,
ಹೊರಟಿಹರು ಚಂದ್ರನೆಡೆಗೆ ವಲಸಿಗರು.


ಹಿಂದೆ ಎಂದೋ ಒಮ್ಮೆ
ಬದುಕೂ ಇತ್ತು,
ಹೊರಟಿದ್ದರು ಸೂರ್ಯನೆಡೆಗೆ.



- ವಿಶ್ವನಾಥ್. ಡಿ. ಎ (Jonathan King ರ “Everyone’s gone to the Moon”ನ ಭಾವಾನುವಾದ)

ಆಸೆ

ಕಡಲಾಚೆ ಆಚೆ,
ತೀರವನು ಹುಡುಕಿ,
ನಾವಿಕನ ದೂರ ಪಯಣ.
ಹುಡುಕಿದಷ್ಟು,
ಕಣ್ಹರಿಯುವಷ್ಟು,
ಕಡಲಿನದೆ ಪರಿಭ್ರಮಣ.

ತುಂಬಿಕೊಂಡಿಹನು,
ಹಲವು ಕನಸುಗಳು,
ಕಣ್ಣ ಅಂಚಿನಲ್ಲಿ.
ಮನೆಯ ತೊರೆದು,
ಅದೆಷ್ಟು ಕಾಲವೋ,
ಕ್ಷಣಿಕ ಬದುಕಿನಲ್ಲಿ.

ಭ್ರಮೆಯೇ ನಿಜವಹುದು,
ನಿಜವೆ ಭ್ರಮೆಯೋ,
ತಿಳಿಯದೆ ಸಾಗುತಿಹನು.
ತಿಳಿಯದಿದ್ದರೂ ತಿಳಿಯುವತ್ತ,
ಹುಟ್ಟು ಹಾಕಿ,
ಕ್ರಮಿಸುವನು.

ವಿಶ್ವನಾಥ್

ಪ್ರೇಮ ಕವಿತೆ - ೧

ಎನಿತು ಹೇಳಲಿ ಎನ್ನ,
ಮನದ ಕಾಂಕ್ಷೆಗಳನ್ನ,
ಒಲವ ತೋಟದ ಹೂ ಚನ್ನೆ.
ಅರಳಿರುವೆ ಮನದನ್ನೆ,
ಮಾತೀಗ ಬರಿ ಸೊನ್ನೆ,
ಹೇಗೆ ಹೇಳಲಿ ಎನ್ನ ಹೇಮಕನ್ನೆ.

ನೋಡು ಬಾನಿನ ಅಂಚು,
ಬೆಳ್ಳಿ ಮೋಡದ ಸಂಚು,
ಅದುವೆ ಎನ್ನ ತೆರೆದಂಚೆ.
ಏಳು ಬಣ್ಣದ ಬಿಲ್ಲು,
ಮಳೆಯ ಆಲಿಕಲ್ಲು,
ಎನ್ನ ಭಾವವೆ ಎಲ್ಲೆಲ್ಲು.

ನೀನಿರದ ನೋಟಗಳು,
ನೊಂದಿಹವು ಕಣ್ಣುಗಳು,
ಬೇಸರವೆ ನಿದಿರೆ ಕನಸುಗಳು.
ಬದುಕು ಕನಸಾಗಿಸದೆ,
ಕನಸು ಬರಿದಾಗಿಸದೆ,
ಬಾರೆಯ ಎನ್ನ ಕಣ್ಣ ಮುಂದೆ.

ವಿಶ್ವನಾಥ್

ಏನು ಬರೆಯಲಿ ಇಂದು...

ಏನು ಬರೆಯಲಿ ಇಂದು
ಕಥೆಯೆ ಕವನವೆ ಒಂದು?
ಕ್ಷಣ ಯುಗದ ಚರಿತೆಗಳ
ನಾಟಕವೆ ಒಂದು?

ಕಪ್ಪು ಕಣ್ಣಿನ ಚೆಲುವೆ
ಹೊಗಳಿ ಬರೆಯಲೆ ಮೊದಲೆ?
ಶೂರನೊಂದಿಗೆ ಮದುವೆ
ಮಾಡಿ ಮುಗಿಸಲೆ ಕೊನೆಗೆ?

ತತ್ವ ಶಾಂತಿಯ ಬದನೆ
ಕಾಯಿ ತುಂಬಿಸಿ ಇಡಲೆ?
ದಿನ ’ನಿತ್ಯ’ದಾನಂದ
ಹಾಳೆ ತುಂಬಿಸಿ ಬಿಡಲೆ?

ಸಂಜೆ ಕೆಂಪಿನ ಬಾನು
ಹಚ್ಚ ಹಸಿರಿನ ಕಾನು
ಹಾಳು ಮನೆಯ ಕಮಾನು
ಬಣ್ಣಿಸಿಡಲೇ ನಾನು.

ಏನು ಬರೆಯಲಿ ಹೇಳಿ
ಹಾಳೆಯಿನ್ನೂ ಖಾಲಿ
ಹೇಳಿ ಅದೇನೆಂದು
ಕಥೆಯೆ ಕವನವೆ ಒಂದು?

ಬೇಲಿ

ಚಂದದರಮನೆ ಕಟ್ಟಿ
ಬಿಂಕದರಸಿಯನಿರಿಸಿ
ರತ್ನಗಂಬಳಿ ಹೊದ್ದು
ಮಲಗಿದ್ದು ಸಾಕು.

ಬದುಕಿನಲಿ ಮಾಡಿರುವೆ
ಸಾಕಷ್ಟು ನಿದ್ದೆ,
ಸ್ವಪ್ನದಲೂ ಏಕಯ್ಯ
ನಿದ್ದೆಯಲಿ ಬಿದ್ದೆ?

ಹೇಗೆ ಆದೀತು ನನಸು
ಅಂಥ ಬಾಳ್ವೆಯ ಕನಸು,
ಸುತ್ತ ಕಟ್ಟಿಕೊಂಡು ನೀ
ಬೇಲಿಗಳ ಸಾಕಷ್ಟು.

ಎಂದೋ ಒಮ್ಮೆ ಎದ್ದು
ನಾಯಿನರಿಯೋ ನೋಡದೆ
ತಿಜೋರಿಯ ಕೀಲಿ ಕೈ ಕೊಟ್ಟು
ಬೀಳುವುದೇಕೋ ಮತ್ತದೇ ನಿದ್ದೆಗೆ?

ಹೇಗೆ ನಿಂತೀತು ಅರಮನೆ
ಸಿಗುವಳೇಕೆ ಯಾವ ಅರಸಿ,
ರತ್ನಗಳ ಬಿಡು ನೀ
ನೂಲಾದರೂ ಸಿಕ್ಕೀತೆ?

ತರವೇ ನಿನ್ನಯ ಮೌನ
ಹೇಳು ಭಾರತೀಯನೆ
ಸುಳ್ಳು ಕತ್ತಲೆ ಸರಿಸಿ
ಬರುವುದೇ ನಿನ್ನಯ ದನಿ?

ಬೇಲಿಗಳ ಕಿತ್ತೊಗೆದು
ಕಂದಕಗಳ ಹಾರಿ
ನರಿಗಳ ಬೇಟೆಯಾಡಲು
ಬರುವುದೇನು ನಿನ್ನ ದನಿ?

ಎಲ್ಲರಲ್ಲೊಂದು ತಾರೆ

ಮುಗಿಲ ತೆರೆಯಲೊಂದು ತಾರೆ
ಶಕ್ತಿ ಮೀರಿ ಮಿನುಗುತಿದೆ.
ಬಾನಿನೆಲ್ಲ ದಿಗಂತಕ್ಕೆ
ವ್ಯಾಪಿಸಲದು ಕಾದಿದೆ.

ಒಂಟಿ ತಾನು, ತುಂಬ ಕ್ಷುದ್ರ
ಎಂಬ ದುಃಖ ಅದಕಿದೆ.
ಆದರೂ ಕೂಡ ಯಾವ ಚಿಂತೆಗೂ
ತಲೆಗೊಡದೇ ನಡೆದಿದೆ.

ಸೂರ್ಯ ಚಂದ್ರರೆಂಬ ದೈತ್ಯರು
ಮರೆ ಮಾಡುವ ಭಯವಿದೆ.
ಚಿಕ್ಕ ಅವಕಾಶವೂ ಬಿಡದೆ
ಪ್ರಯತ್ನ ಮುಂದುವರೆಸಿದೆ.

ನೋಡಿದ ಕಣ್ಣು ಸಾವಿರ ವರುಷ
ಮರೆಯಲಾಗದಂಥ ದಿನ.
ಬಂದೇ ಬರುವುದೊಂದು ದಿನ
ಕಾಯುವೆ ಅಂಥ ದಿನಕೆ ದಿನ.
                     
           -ವಿಶ್ವನಾಥ್

ತಿಂಮನ ಬೆಂಗ್ಳೂರ್ ಸವಾ(ಫಾ)ರಿ

ತಿಂಮ ಬಂದ ಬೆಂಗ್ಳೂರ್‍ಗೆ
ಕನಸನ್ತುಂಬ್ಕೊಂಡ್ ಕಣ್ಣೊಳ್ಗೆ
ಎಂದೂ ಕಾಣದ್ ಕೆಂಪೇಗೌಡರ್‍
ಕನಸಿನ್ ಊರನ್ ಕಾಣೋಕೆ.
ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದು
ಬಟ್ಟೆಗಂಟನ್ಹೊತ್ಕಂಡ್ನಡೆದು
ನಡ್ದು ನಡ್ದು ಸುಸ್ತಾಗೋದ್ರೊಳ್ಗೆ
ಕಡೆಗೂ ಬಂದ ಮೆಜೆಸ್ಟಿಕ್ ಒಳಗೆ.
ದಾರಿ ಕಾಣದ್ ನಮ್ಮ ತಿಂಮ
ಹಿಡಿದ ಸುಮ್ನೆ ನಿಂತೋನನ್ನ
ಕೇಳ್ದ ’ಇದಾನಸೋದ ನೋಡೋಕ್
ಎಲ್ಲೀಗ್ ಹೋಗ್ಬೇಕಂತೇಳಣ್ಣಾ’.
’ಕೊಡು ಹತ್ರುಪಾಯ್
ಹೇಳ್ತೀನ್ ದಾರಿ
ಏನ್ಬೇಕ್ ಕೇಳು
ಹೇಳ್ತೀನ್ ತೋರಿ’.
’ದಾರಿ ತೋರ್‍ಸಾಕ್ ಹತ್ರುಪಾಯಿ
ಸುಮ್ಕೆ ಯಾಕೆ ಕೊಡ್ಬೇಕೇಳಿ?
ಏನೂ ಅರೀದವ್ನಲ್ಲೀ ತಿಂಮ
ಎಲ್ಲಾ ತಿಳಿದ ಭಾರೀ ಬೊಮ್ಮ’.
ಸರೀ ಹೇಗೋ ಹುಡ್ಕಿ ನಡ್ದೀ
ವಿಧಾನಸೌಧ ಕಡ್ಗೂ ತಲ್ಪಿ
ನೋಡ್ತಾ ಬಿಟ್ಟ್ಕಣ್ ಹಾಗೇ ಬಿಟ್ಟಿ
ಮರೆತೇ ಬಿಟ್ಟ ತಂದಿದ್ ರೊಟ್ಟಿ.
ಹೊಟ್ಟೆ ಹಸ್ದಾಗ್ ಎಚ್ಚರ್‍ಗೊಂಡು
ಪಕ್ದಲ್ನೋಡ್ತಾನ್ ಮೈತಡವ್ಕೊಂಡು
ಇಲ್ಲವೇ ಇಲ್ಲ ಬಟ್ಟೆ ಗಂಟು
ತಿಂಮಿ ಮಾಡ್ಕೊಟ್ ರೊಟ್ಟಿ ಗಂಟು.
ಹಸಿದ ಹೊಟ್ಟೆ ಹೊತ್ಕಂಡ್ ತಿಂಮ
ನಡೆದಾ ಕಬ್ಬನ್ ಪಾರ್ಕಿನ್ ತುಂಬಾ
ಏನೂ ತಿನ್ನಾಕ್ ಸಿಗದೆ ಕಡ್ಗೆ
ತಿಂದ ಹಳೇ ಕಳ್ಳೇಪುರಿಯನ್ನ.
ಇಷ್ಟಕ್ ಸುಸ್ತಾಗದ್ ನಮ್ ತಿಂಮ
ಹೊರಟ ಸುತ್ತೋಕ್ ಬ್ರಿಗೇಡ್ ರೋಡನ್ನ
’ನಾಚಿಕೆ ಮಾನ ಏನೂ ಇಲ್ಲಾ
ಚಡ್ಡಿ ಹಾಕ್ಕೊಂಡ್ ನಡೀತಾರಲ್ಲಾ?’
’ಇವರ್‍ಗಳ್ಗಿಂತ ನಾನೇ ವಾಸಿ
ಲುಂಗಿನಾರಾ ಉಟ್ಕಂಡಿವ್ನಿ
ಕನ್ನಡ ಯಾರೂ ಮಾತಾಡಲ್ಲ
ಕನ್ನಡಿಗ್ರಾದ್ರೂ ಇಂಗ್ಲೀಷೇ ಎಲ್ಲಾ’.
ಇಂದಿನ ಬೆಂಗ್ಳೂರ್ ಕಂಡು ತಿಂಮ
ನೆನೆಯುತ ಕೆಂಪೇಗೌಡರನ್ನ
ಹತ್ತಿದ ತನ್ನೂರ್‍ಗ್ ಹೋಗೋ ಬಸ್ನ
ಜೇಬ್ನಾಗ್ ಹುಡುಕ್ತ ಕಳ್ದೋದ್ ಪರ್ಸ್ನ.
ವಿಶ್ವನಾಥ್ ಡಿ ಎ

ಪ್ರವಾಹ

ಹತ್ತಿ ಉರಿವ ಧರೆಯ ಮೇಲೆ,
ಕುಣಿಯಿತೊಂದು ವರ್ಷ ಧಾರೆ,
ಭುವಿಗೇ ಮೋಡ ಉಕ್ಕಿ ಹರಿದು,
ಬಿಡದೆ ಒಂದೂ ಜಾಗ ಬರಿದು.
ಧಗೆಯು ಕರಗಿ ಹೋಗುದಿಂದು,
ಬಿತ್ತಿದ ಬೀಜ ಮೊಳೆವುದಿಂದು,
ಎಂದೆನುತಲಿ ನಲಿದ ಜನರು,
ಕಳೆದರಿರುಳ ಕ್ಷಣದ ಸರಳು.
ಬೆಳಗಾಗಲು ತಲೆಯ ಮೇಲೆ,
ಕಣ್‌ಹನಿಸಿತು ಮುಖದ ಮೇಲೆ,
ನೀರಲಿ ಹುಡುಕಿ ನೆಲದ ಜಾಡು,
ಇಲ್ಲದೆ ತಲೆಯ ಮೇಲೊಂದು ಮಾಡು.

ಊರು ಇಲ್ಲ, ಕೇರಿ ಇಲ್ಲ,
ಅಳಿದುಳಿದದು ಊರೇ ಅಲ್ಲ.
ಮಂದಿರ ಮಸೀದಿ ಒಂದೆ ಎಲ್ಲ,
ಒಂದೇ ಚೌಕ, ಸ್ಮಶಾನವೆಲ್ಲ.
ಹರಿಯಿತಾಗ ಸ್ನೇಹ ಹಸ್ತ,
ಸಹಾಯ ಹಸ್ತ, ಅಭಯ ಹಸ್ತ,
ನಾವು ನೀವು ಒಂದೇ ಎಲ್ಲ,
ಬನ್ನಿ ಬಾಳ್ವ ಒಟ್ಟು ಎಲ್ಲ.
ಎಂದೆನುತಲಿ ಮಿಡಿದವಾಗ,
ಕಂಬನಿಗಳ ಕಡಲ್ಗಳಿಗೆ,
ಹೆಮ್ಮೆಯಿಂದ ತಾಯೆ ಕನ್ನಡ
ಹೆತ್ತ ಕನ್ನಡಿಗರ್ ಹೃದಯವು.

ನನ್ನ ಒಲವು

ಹಾಡುತಿರುವೆ ನನ್ನ ಪ್ರೇಮಿಕೆ,
ನಿನ್ನ ಹೃದಯ ಬಡಿತದ ತಾಳಕೆ.
ಇನ್ನೂ ಕೇಳದೆ ನಿನ್ನ ಮನಕೆ
ಬಡ ಪ್ರಿಯಕರನೀ ಕೋರಿಕೆ.

ಹುಟ್ಟುವನು ಆ ಸೂರ್ಯನಲ್ಲಿ,
ನಿನ್ನ ಕಣ್ಣ ಬಾಂದಳದಲ್ಲಿ.
ಮೋಹಕವದು ಪ್ರೇಮ ಪರಿಮಳವಲ್ಲಿ,
ನಿನ್ನ ಬಿಸಿ ಉಸಿರಿನಲ್ಲಿ.

ನಿನ್ನ ಧ್ವನಿಯದು ಗುಡುಗು,
ತಿರುಗಿ ನೋಡಿದವರೆಲ್ಲಾ ಬೆರಗು.
ಏನು ಮೈಮಾಟದ ಚೆಲುವು,
ಮೂಡದೇ ಮತ್ತೆ, ನಿನ್ನಲ್ಲಿ ಒಲವು?

ಕುದಿಯುವನೋ ಏನೋ ನನ್ನ ಕಂಡು,
ಪ್ಲೇನನ್ನೇ ಓಡಿಸುವ ಪೈಲೆಟ್ಟು.
ನನಗೆ ನಿನ್ನಯ ಸಖ್ಯದ ಗುಂಡು,
ಓ ನನ್ನ ಪ್ರೀತಿಯ ಬುಲೆಟ್ಟು.

ವಿಶ್ವನಾಥ್.ಡಿ.ಎ

ಮರಳಿ ಮಣ್ಣಿಗೆ

ಸಂಜೆ ತಲುಪಿದೆ ಕೇಳು
ಕತ್ತಲಪ್ಪುವ ವೇಳೆ
ಎಚ್ಚೆತ್ತು ನೋಡು
ಮರಳಿ ಮಣ್ಣಿನೆಡೆಗೆ.

ಹಿರಿತನದ ಬಾಳ್ಬಿಟ್ಟು
ಸಿರಿಯನದ ಕೂಡಿಟ್ಟು
ಜಗವ ಕೊಳ್ಳುವ ಭರದಿ
ಹೀಗೋಡಿದ್ದೇಕೆ.

ಹಳ್ಳಿಯಲ್ಲೇನಿದೆ ಮಣ್ಣು
ಹೀಗಳೆದು ಹೋದದ್ದು ನೀನು.
ರೈತನೇ ದೇಶದ ಕಣ್ಣು
ಎಂಬುದ ಮರೆತೆಯೇನು?

ಮೊಗ್ಗರಳುವುದ ಕಾಣು
ನಗರದಲ್ಲೇನಿದೆ ಮಂಕೆ?
ಸೂರ್ಯಾಸ್ತದಲ್ಲಿರಬೇಡ
ನಡೆ ಉದಯದೆಡೆಗೆ.

ಅನ್ನದಾತನ ನಾಡು
ವಿಶ್ವಮಾನವರ ಬೀಡು
ಹಳ್ಳಿಯೆಡೆ ಸಾಗೋಣ,
ನಡೆ ಗೆಳೆಯ ಮಣ್ಣಿಗೆ,
ಮರಳಿ ಮಣ್ಣಿಗೆ.

-ವಿಶ್ವನಾಥ್.ಡಿ.ಎ

ತಿಮ್ಮನ ಕನಸು

ಮನದ ಕವಿತೆಯ ಹಾಡು
ಹುಡುಕಿ ಹೊರಟೆನು ನಾನು
ಅಗಾಧ ಕಲ್ಪನಾಲೋಕವನು
ಸೆರೆ ಹಿಡಿಯಲು ಹೊರಟೆ ನಾನು.

ಏನಿಹುದು ಏನಿಲ್ಲ
ಇಲ್ಲವೆಂಬುದೊಂದಿಲ್ಲ
ಉಳಿದಿದ್ದೆಲ್ಲಾ ಮೂರ್ತ ರೂಪ
ತಾಳಿದೆ ಇಲ್ಲೆಲ್ಲಾ.

ಚಂದ ಮಾಮನ ಬಣ್ಣ
ನಾ ಆಗಿಹೆನಣ್ಣ
ಕಣ್ಣಿಗೆ ಕಾಣುವವರಲ್ಲೆಲ್ಲಾ
ಇದ್ದವನು ನಾನೇ ಸಣ್ಣ.

ಹೇಳುವವರ್ ಕೇಳುವವರ್
ಇಲ್ಲದೇನಿಲ್ಲ ಇಲ್ಲಿ
ಹೇಳುವವನ್ ನಾನು
ಕೇಳುವವರೆಲ್ಲರೂ.

ಇಲ್ಲ ಲೆಕ್ಕದ ಗೋಳು
ಇಲ್ಲ ಮೇಷ್ಟರ ಬೆತ್ತ
ಪ್ರತಿದಿನವು ರಜೆಯಿಲ್ಲಿ
ಕಲ್ಪನೆಯ ಶಾಲೆಯಲ್ಲಿ.

ಇದ್ದಕ್ಕಿದ್ದಂತೆಯೇ ತಟ್ಟಿದರು ಯಾರೋ
'ಬೆಳಗಾಯಿತೆದ್ದು ಬಾರೋ
ಕರಿ ಮೂತಿ ಠೊಣಪನೇ
ಶಾಲೆಗೆ ಹೊತ್ತಾಯ್ತು ಬೇಗ ಬಾರೋ'.

ಆಗಲೇ ಗೊತ್ತಾದದ್ದು
ಕನಸು ಅದು ಕಂಡದ್ದು
ಕನಸಿನಲ್ಲಿ ಎದ್ದ ಹಾಡು
ಕಲ್ಪನೆಗೇ ಮರಳಿತು ದೌಡು ದೌಡು ||

ವಿಶ್ವನಾಥ್.ಡಿ.ಎ.

ಸೂರ್ಯ

ಮೂಡಣದಿ ಹುಟ್ಟಿ
ಕತ್ತಲೆಯ ಮೆಟ್ಟಿ
ತಾವರೆಗಳ ಅರಳಿಸುತ
ಬರುವನಾ ಸೂರ್ಯ.

ಮನಸಿನಾ ಕನಸಿನಾ
ರಾತ್ರಿಯನು ಕರಗಿಸುತ
ಭರವಸೆಯ ಹೊಂಗಿರಣವ
ತರುವನಾ ಸೂರ್ಯ.

ಭೂಮಿಯಾ ಒಡಲಿಗೆ
ರೈತನಾ ದುಡಿಮೆಗೆ
ಶಕ್ತಿಯಾ ನೀಡುತ್ತ
ಇರುವನಾ ಸೂರ್ಯ.

ಸಾಧನೆಗೆ ಸ್ಫೂರ್ತಿ
ಚಿಂತನೆಗೆ ಭರ್ತಿ
ಸರಕನ್ನು ನೀಡುತ್ತ
ಸರಿವನಾ ಸೂರ್ಯ.

ಪಡುವಣಕೆ ಸರಿಯುತ್ತ
ಮತ್ತೆ ಕನಸನ್ನುಹೊತ್ತಿಸುತ್ತ
ಚಂದ್ರ ತಾರೆಯರ ಕೊಡುಗೆ
ನೀಡಿ ಹೋಗುವನಾತ

ವಿಶ್ವನಾಥ್.ಡಿ.ಎ

ಮೌನ ವಲಸೆ

ಎಲ್ಲಿ ಹೋದವು ಶುಕಗಳು?
ಎಲ್ಲಿ ಹೋದವು ಗುಬ್ಬಚ್ಚಿಗಳು?
ಕಣ್ಣಿಗೆ ಕಾಣದಷ್ಟು,ಕಿವಿಗೆ ಕೇಳದಷ್ಟು
ದೂರ ಹೋದವು ಏಕೆ ಪಾರಿವಾಳಗಳು?

ಚಂದಗೆ ಮೈದುಂಬಿ,ಪುಟ್ಟ ಕಣ್ಮಿಟುಕಿಸುತ
ಕಾಳು ಕದಿಯುತ್ತಿದ್ದ ಅಳಿಲುಗಳೆಲ್ಲಿ?
ಚಿನ್ನದಾ ಬೆಳಕಲ್ಲಿ, ಮೈತುಂಬ ನೀಲಿಹೊದ್ದು
ಮೀನು ಹಿಡಿಯುತ್ತಿದ್ದ ಆ ಮಿಂಚುಳ್ಳಿಗಳೆಲ್ಲಿ?

ಹೋದವು ಕಣ್ಣಿನಿಂದಾಚೆ,
ಹೋದವು ಬಾನಿನಿಂದಾಚೆ,
ಹುಡುಕುತ್ತ ನೆಲೆಯನ್ನು,
ಗೂಡು ಕಟ್ಟುವ ಕನಸನ್ನೂ.

ಏನು ಉಳಿದಿದೆ ಇಂದು?
ಬರಿಯ ಮಣ್ಣಿನ ಕಂದು.
ಹಾಳು ಹಂದಿಯ ಹಿಂಡು,
ಬೀಡಾಡಿ ದನಗಳು ದಂಡು ದಂಡು.

ಏಕೆ ಬರಬಾರದೆ ಮತ್ತೆ ಅವು?
ಹೇಗೆ ಬಂದಾವು,ಬರೀ ಕಾಂಕ್ರೀಟ್ನ ಕಾವು.
ಹೂವು ಹುಡುಕುವುದೆಲ್ಲಿ,ಕಾಳು ಕದಿಯುವುದೆಲ್ಲಿ?
ಮರಗಳೇ ಸುಮ್ಮನೆ ನಡೆದಾಗ, ಇವುಗಳ ಮಾತೆಲ್ಲಿ, ಇವುಗಳ ಮಾತೆಲ್ಲಿ?

ವಿಶ್ವನಾಥ್.ಡಿ.ಎ

ಭೂಮಿತಾಯಿ

ಅವಳನ್ನು ಇಂಚಿಂಚು ಬಿಡದಂತೆ
ನಿಧಾನವಾಗಿ ಮಾರಾಟಮಾಡತೊಡಗಿದ್ದಾಯಿತು.
ಅವಳನ್ನು ಮನಸ್ಸಿಗಿಚ್ಛೆ ಬಂದಂತೆ
ದುಡಿಸಿಕೊಂಡದ್ದಾಯಿತು.

ಆದರೂ ಅವಳು ಸಿಟ್ಟಿಗೆದ್ದಿಲ್ಲ.
ಅವಳ ಮೈ ಚರ್ಮದಲ್ಲರ್ಧ ಕಿತ್ತಿದ್ದಾಗಿದೆ;
ಅವಳ ನೆತ್ತಿ ಪಾದಗಳ ಕೆಳಗೆ ಬೆಂಕಿಯಿಟ್ಟಿದ್ದಾಗಿದೆ;
ಆದರೂ ಅವಳು ಆಗೊಮ್ಮೆ ಈಗೊಮ್ಮೆ
ರೋಧಿಸಿದ್ದು ಬಿಟ್ಟರೆ ಮತ್ತೇನೂ ಅಂದಿಲ್ಲ.

ಅವಳ ಸೀರೆಗೆ ಬೆಂಕಿ ಹತ್ತುವವರೆಗೂ;
ಆ ಬೆಂಕಿ ಎಲ್ಲರನ್ನೂ ನುಂಗಿಕೊಳ್ಳಲಿದೆ
ಎಂದು ತಿಳಿಯುವವರೆಗೂ;
ಆಕೆಯನ್ನು ದುಡಿಸಿಕೊಂಡ್ಡದ್ದಾಯಿತು.
ಆದರೂ ಅವಳು ಸುಮ್ಮನಿದ್ದಳು.
ಹೊಟ್ಟೆಯೊಳಗಿನ ಜ್ವಾಲಾಮುಖಿ
ತಣ್ಣಗಾದೀತು ಇಂದಾದರೂ ಎಂದು.

ಆದರೆ ಇನ್ನು ಆಕೆ ಸಹಿಸಲೊಲ್ಲಳು,
ಹರಿಶ್ಚಂದ್ರನ ಚಂದ್ರಮತಿಯಂತಿರುವುದ ನಿಲ್ಲಿಸಿದ್ದಾಳೆ.
ಹತ್ತಿರುವ ಆಕೆಯ ಒಡಲಿನ ಬೆಂಕಿಗೆ
ತಣ್ಣೀರು ಎರೆಯದಿದ್ದರೆ, ಆಸ್ಫೋಟಿಸದಿರಳು ಆಕೆ.
ಪ್ರತಿಕ್ಷಣವೂ ಬೆಂಕಿ ಉತ್ಪಾದಿಸುತ್ತಿರುವ ನಮಗೆ
ತಿಳಿದೀತೆ ಆಕೆಯ ಒಡಲಿನ ಬೆಂಕಿ ಆರಿಸುವ ನೀರೆಲ್ಲಿದೆಯೆಂದು?

ವಿಶ್ವನಾಥ್.ಡಿ.ಎ