ಬುಧವಾರ, ಏಪ್ರಿಲ್ 4, 2018

ಪ್ರೀತಿಯೊಂದೇ ದಾರಿ



ಮುಗುಳುನಗೆ ಮೀರಿ ಬರಲಿ
ಸವಿ ಮಾತುಗಳಿನಿತು ಹೊರಗೆ.
ಬಿಗು ಮನವ ಮೀರಿ ಅರಳಲಿ
ಪ್ರೀತಿ ಹೂ ಮೆಲ್ಲಗೆ.

ತೀರದಲ್ಲಿ ನಿಂತು ಬಿಡಲಿ
ಕಳವಳಗಳ ದೋಣಿ.
ನಿನ್ನಷ್ಟೇ ಅರಿವು ನನಗೆ
ನಾನೂ ಒಬ್ಬ ಪಯಣಿ.

ತಿಳುವಳಿಕೆಯ ನಗರದಲ್ಲಿ
ಪ್ರೀತಿಯೊಂದೇ ದಾರಿ.
ನನಗೂ ನಿನಗೂ ಬೇಕಿರುವುದಷ್ಟೇ
ಜೀವನದಲ್ಲೊಂದು ಬಾರಿ.

-ವಿಶ್ವನಾಥ್

ಸೋಮವಾರ, ಜನವರಿ 2, 2017

ಜ್ಯೋತಿಷ್ಯದ ವಿಷ್ಯ

   "ನಿಮ್ಮ ಗ್ರಹಚಾರ ಹೇಗಿದೆ ಇಂದು? ಗ್ರಹಗಳು ನಕ್ಷತ್ರಗಳು ಯಾವ ಮನೆಗಳಲ್ಲಿ ಇವೆ. ಇದ್ರೆ ಮಲಗಿದೆಯೋ, ಎದ್ದಿದೆಯೋ ಅಥವಾ ಓಡಾಡುತ್ತಾ ಇವೆಯೋ? ಮಲಗಿದ್ರೆ ಏನು ಲಾಭ, ಎದ್ದಿದ್ರೆ ಏನು ನಷ್ಟ?"
   ದಿನವೂ ಹೀಗೆ ಹಲವಾರು ರೀತಿಯ ಜ್ಯೋತಿಷ್ಯ ಕಾರ್ಯಕ್ರಮಗಳನ್ನ ನೋಡಿರಬೇಕಲ್ಲ? ಯಾವ ಕನ್ನಡ ನ್ಯೂಸ್ ಚ್ಯಾನಲ್ ಹಾಕಿದ್ರೂ ಬೆಳಗ್ಗೆ ಒಮ್ಮೆ, ಸಂಜೆ ಒಮ್ಮೆ ಮತ್ತು ಆಗಾಗ ವಿಶೇಷ ಸಂಚಿಕೆಗಳು. ಬೆಳೆಯುತ್ತಿರುವ ಸ್ಪರ್ಧಾ ಪ್ರಪಂಚದಲ್ಲಿ ಹಿಂದೆ ಬೀಳಲು ಇಚ್ಛಿಸದ ಚ್ಯಾನಲ್ಗಳು ಏನಾದರೂ ವಿಶೇಷತೆ ಇರಬೇಕು ಅಂತ ವಿಧವಿಧವಾದ ಜ್ಯೋತಿಷಿಗಳನ್ನ ಕರೆಸುತ್ತಾರೆ. ಒಬ್ಬೊಬ್ಬ ಜ್ಯೋತಿಷಿಯ ವೇಷ ಭೂಷಣಗಳು ಬೇರೆಯ ಚ್ಯಾನಲ್ಗಳಿಗಿಂತ ಜೋರು. ಒಬ್ಬರು ವಿಭೂತಿಯೋ ನಾಮವೋ ಇಟ್ಟುಕೊಂಡು ಬಂದರೆ ಮತ್ತೊಂದರಲ್ಲಿ ವಿಭೂತಿ/ನಾಮದ ಜೊತೆ ಕೊರಳಲ್ಲಿ ಏನಾದರೂ ಹಾರ (ಬಂಗಾರದ್ದು ಅಥವಾ ಇನ್ಯಾವುದದ್ದಾದರು). ಮತ್ತೂ ಒಂದು ಚ್ಯಾನಲ್ಲಿನಲ್ಲಿ ಇವೆಲ್ಲದರ ಜೊತೆ ಕೈಗಳ ಅಷ್ಟೂ ಬೆರಳುಗಳಿಗೆ ಉಂಗುರಗಳು. ಅಲಂಕಾರ ಹೆಚ್ಚಿದ್ದಷ್ಟೂ ಹೆಚ್ಚು ಬೆಲೆ, ಗೌರವ. ಇನ್ನು ಅವರು ಫೋನ್ ಲೈನ್ ಕಾರ್ಯಕ್ರಮ ನಡೆಸಿದಾಗ ಕೇಳುವುದಿಷ್ಟೇ - ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕ. ಇಷ್ಟಿದ್ದರಾಯ್ತು, ನಿಮ್ಮ 'ಬ್ರಹ್ಮಾಂಡ' ಜಾತಕದ ದರ್ಶನ ಮಾಡಿಸುತ್ತಾರೆ. ನೀವು ಎಲ್ಲಿ ಮನೆ ಮಾಡಬೇಕು, ಹೇಗೆ ಮಲಗಬೇಕು, ಏನು ಊಟ ಮಾಡಬೇಕು, ಒಟ್ಟಿನಲ್ಲಿ ನೀವು ಇರಬೇಕೋ ಬೇಡವೋ ಎಂಬ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ನಿಮಗೆ ಏನಾದ್ರು ಕಷ್ಟವಿದ್ರೆ ನೀವು ದೇವರ ಹತ್ರ ಸಮಯ ವ್ಯರ್ಥ ಮಾಡಬೇಡಿ. ಏಕೆಂದರೆ ನೀವು ಹೋಗಿರುವ ದೇವ್ರು ಸರಿಯಾದದ್ದಲ್ಲದಿರಬಹುದು. ಒಂದು ಅರ್ಜಿಯ ಶೀಘ್ರ ವಿಲೇವಾರಿಗೆ ಯಾವ ಮಂತ್ರಿ ಸೂಕ್ತ, ಎಷ್ಟು ಕೊಟ್ಟರೆ ಸೂಕ್ತ ಎಂದು ಹೇಗೆ ಸರ್ಕಾರಿ ಗುಮಾಸ್ತನನ್ನು ಕೇಳುತ್ತೀರೋ, ಹಾಗೇ ಈ ಜ್ಯೋತಿಷಿಗಳನ್ನು ಕೇಳಬೇಕು. ಅವರು ನಿಮ್ಮ ಕಷ್ಟಗಳಿಗೆ ಯಾವ ದೇವರು ಸೂಕ್ತ, ಏನು ಹರಕೆ ಕಟ್ಟಬೇಕು, ಏನು ಪೂಜೆ ಮಾಡಿಸಬೇಕು ಎಂದೆಲ್ಲ ಹೇಳುತ್ತಾರೆ. ಅದನ್ನು ಮಾಡಿಸಿ ನೋಡಿ, ನಿಮ್ಮ ಕಷ್ಟಗಳು ಹೇಗೆ ಕಳೆಯುತ್ತೆ ಅಂತ. ಹಾಗೇನಾದ್ರು ಕಡಿಮೆಯಾಗದಿದ್ದರೆ ನೀವೇನೋ ಪೂಜೆಯಲ್ಲೋ, ಹರಕೆಯಲ್ಲೋ ಲೋಪವೆಸಗಿದ್ದೀರಿ. ಅದೂ ಪಾಪವೇ ಹಾಗಾಗಿ ಅದರ ಪರಿಹಾರರ್ಥವಾಗಿ ಮತ್ತೊಂದು ಪೂಜೆ, ತಪ್ಪು ಕಾಣಿಕೆ, ಸಹಸ್ರ ನಾಮಾವಳಿ ಸೇವೆ ಅತ್ಯಗತ್ಯ. ಇಷ್ಟು ಮಾಡುವುದರಲ್ಲಿ ಮತ್ತೇನಾದರೂ ಸಮಸ್ಯೆಯಲ್ಲಿ ಸಿಲುಕಿದರೆ ಅದಕ್ಕೆ ಮತ್ತೆ ಫೋನ್ ಮಾಡಿ ಪರಿಹಾರ ಕೇಳಿ. ಇಲ್ಲಿ ಪರಿಹಾರವಿಲ್ಲ ಎಂದರೆ ಮತ್ತೊಂದು ಚ್ಯಾನಲ್ ನೋಡಿ. ಆನಂತರ ಮತ್ತೊಂದು. ಇವೆಲ್ಲ ನೋಡಿಯೂ ನೀವು ಎದೆಗುಂದದಿದ್ದರೆ ಕೇಬಲ್ ಟಿವಿ ನೋಡಿದರೆ 11 ದಿನಗಳಲ್ಲಿ, 21 ದಿನಗಳಲ್ಲಿ ವಿದ್ಯೆ, ವ್ಯಾಪಾರ, ಸತಿಪತಿ ಕಲಹ, ವಶೀಕರಣ, ಕೋರ್ಟ್ ವ್ಯಾಜ್ಯ, ಮಾಟ ಮಂತ್ರ ಮತ್ತು ಇತರೆ ನಿಮ್ಮ ಘೋರ ನಿಗೂಢ ಸಮಸ್ಯೆಗಳನ್ನು ಪರಿಹರಿಸಿ ಕೊಡುವವರು ಸಿಗುತ್ತಾರೆ. ಇವರು ಪ್ರಖ್ಯಾತ ಕೇರಳ ಮಾಂತ್ರಿಕ ವಿದ್ಯೆಯಲ್ಲಿಯೋ ಅಥವಾ ಬೆಂಗಾಲಿ ಕಾಳಿ ಆರಾಧನೆಯಲ್ಲೋ ಸಿದ್ಧಿ ಪಡೆದವರಾಗಿರುತ್ತಾರೆ. ಅಷ್ಟು ದೂರದವರಿರದಿದ್ದರೆ ಕನಿಷ್ಠ ಕೊಳ್ಳೇಗಾಲದವರಾದರೂ ಆಗಿರುತ್ತಾರೆ. ಇವರು ಬಹುಜನರ ಒತ್ತಾಯದ ಮೇರೆಗೆ ನಿಮ್ಮ ನಗರದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಮತ್ತು ಸಾಮಾನ್ಯವಾಗಿ ಬಸ್ ಸ್ಟ್ಯಾಂಡ್ ಬಳಿಯೋ ರೇಲ್ವೇ ಸ್ಟೇಷನ್ ಬಳಿಯೋ ಇರುತ್ತಾರೆ.
  
   ನನ್ನ ಈ ವಿಶ್ಲೇಷಣೆ ನಿಮಗೆ ವ್ಯಂಗ್ಯ ಅನ್ನಿಸಿ ನಗಿಸಬಹುದು ಅಥವಾ ಸಿಟ್ಟು ತರಿಸಬಹುದು. ಆದರೆ ನಾನಿದನ್ನು ತುಂಬಾ ಬೇಸರದಲ್ಲಿ ಬರೆಯುತ್ತಿದ್ದೇನೆ. ಏಕೆಂದರೆ ಸುದ್ದಿಗಳನ್ನು ಕೊಡಬೇಕಿದ್ದ ವಾರ್ತಾ ವಾಹಿನಿಗಳು ಇಂದು ಜನಗಳನ್ನು ಕೇವಲ ವೀಕ್ಷಕರೆಂದು ಭಾವಿಸದೆ ಗ್ರಾಹಕರೆಂದು ಭಾವಿಸಿ ಇಂತಹ ಅರ್ಥವಿಲ್ಲದ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ದಾರಿಯಾಗಿವೆ. ಇದರೊಟ್ಟಿಗೆ ಭೂಮಿ ಇನ್ನು ಇರುವುದು ಎಷ್ಟು ದಿನ, ಪ್ರಳಯ ಯಾವಾಗ ಆಗುತ್ತದೆ ಮತ್ತು ಇತರೆ ಅರ್ಥವಿಲ್ಲದ ಕಾರ್ಯಕ್ರಮಗಳು. ಇವುಗಳನ್ನು ಕೇವಲ ಜನರಿಗೆ ತಿಳಿಸಲು ಮಾಡಿದ್ದರೆ ಅದರಿಂದ ಏನು ಉಪಯೋಗವೋ ಗೊತ್ತಿಲ್ಲ. ಆದರೆ ಬಹಳಷ್ಟು ಬಾರಿ ಇವು ಸಾಧ್ಯವಾದಷ್ಟು ಟಿ ಆರ್ ಪಿ ಗಿಟ್ಟಿಸಲು ಮಾಡುವ ತಂತ್ರಗಳಷ್ಟೇ. ಜನರನ್ನು ಜಾಗೃತ ಮಾಡಬೇಕೆನ್ನುವ ಸದುದ್ದೇಶ ಈ ವಾಹಿನಿಗಳಿಗಿದ್ದಿದ್ದರೆ ಭೂ ಕಂಪನ, ಸುನಾಮಿ ಇತರೆ ಪ್ರಾಕೃತಿಕ ವಿಕೋಪಕಗಳು ಆಗುವ ಕಾರಣ ಮತ್ತು ಅವು ಆದಾಗ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಬೇಕಿತ್ತು. ಮತ್ತು ಈ ವಾಹಿನಿಗಳಲ್ಲಿನ ನಿರೂಪಕರು ಕೂಡ ಮಾತನಾಡುವ ಶೈಲಿ ಗಮನಿಸಿದರೆ ಇವರು ನಿಮಗೆ ಸರಿಯಾದ ಮಾಹಿತಿ ಕೊಡುವ ಯಾವ ಸದುದ್ದೇಶವನ್ನೂ ಹೊಂದಿಲ್ಲ ಎಂದು ತಿಳಿಯುತ್ತದೆ. " ಖ್ಯಾತ ಜ್ಯೋತಿಷಿಗಳು ನುಡಿದಂತೆ ಮುಂದಿನ ತಿಂಗಳು ಪ್ರಳಯವಾಗುತ್ತ?", " ಈ ಘಟನೆಗಳು ಪ್ರಳಯದ ಸೂಚನೆಯಂತೆ", ಹಾಗಂತೆ ಹೀಗಂತೆ ಎಂದು ಬರೀ ಸರಿಯಾದ ಆಧಾರವಿಲ್ಲದ ಸುದ್ದಿಗಳನ್ನು ತೋರಿಸುತ್ತಾರೆಯೇ ಹೊರತು ಯಾರಾದರೂ ಭವಿಷ್ಯ(prediction) ಹೇಳಿದ್ದನ್ನ ಸರಿಯೋ ತಪ್ಪೋ, ಇದರ ಹಿಂದಿನ ಕಾರಣಗಳೇನು ಎನ್ನುವ ವಿಶ್ಲೇಷಣೆಗೆ ಹೋಗುವುದಿಲ್ಲ. ಇದು ಕೇವಲ ಜ್ಯೋತಿಷ್ಯವೊಂದಕ್ಕೇ ಸೀಮಿತವಲ್ಲ. ಯಾವುದಾದರೂ ಒಂದು ವೈಜ್ಞಾನಿಕ ಸಂಸ್ಥೆ ಕೊಡುವ ಮಾಹಿತಿಗಳನ್ನೂ ತಮ್ಮ ಟಿ ಆರ್ ಪಿ ದೃಷ್ಟಿಕೋನದಿಂದ ನೋಡಿ ದೊಡ್ಡ ಸುದ್ದಿ ಮಾಡುತ್ತಾರೆಯೇ ಹೊರತು ಅದರ ಪೂರ್ವಾಪರ ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಜನಗಳಿಗೆ ಅಗತ್ಯವಿರುವ ಸುದ್ದಿಯನ್ನು ಪ್ರಕಟಿಸದೆ ಕೇವಲ ಬಹುಪಾಲು ಜನ ಬಯಸುವ ಸುದ್ದಿಗಳನ್ನು ಪ್ರಸಾರ ಮಾಡುತ್ತಾರೆ. ಆದರೆ ಕೇವಲ ಸುದ್ದಿ ವಾಹಿನಿಗಳನ್ನು ದೂರಿದರೆ ಪ್ರಯೋಜನವಿಲ್ಲ. ಜನರೂ ಹಾಗೆ ಇದ್ದಾರೆ.
  
   ಜನಕ್ಕೇನು ಬುದ್ಧಿ ಇಲ್ಲವೇ? ಇದೆ. ಆದರೆ ಸಾಮಾಜಿಕ ಬೆಳವಣಿಗೆಗಳ ಒತ್ತಡಕ್ಕೆ ಸಿಲುಕಿ ವಿವೇಚನೆ ಮತ್ತು ತಾಳ್ಮೆ ಕಡಿಮೆಯಾಗುತ್ತಿದೆ, ಅಸಹನೆ ಮತ್ತು ದುಡುಕುತನ ಜಾಸ್ತಿಯಾಗುತ್ತಿದೆ. ಹೇಗೆಂದರೆ ತಮ್ಮ ಸುತ್ತ ಮುತ್ತಲಿನ ಜನ ದಿಢೀರನೆ ಶ್ರೀಮಂತರಾದರು, ವಿದೇಶಕ್ಕೆ ಹೋದರು, ದೊಡ್ಡ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಸಿಕ್ಕಿತು ಎಂದು ನೋಡಿದಾಗ ನಮಗೇಕೆ ಹಾಗೆ ಬೆಳೆಯಲು ಆಗುತ್ತಿಲ್ಲ ಎಂದು ನೊಂದುಕೊಳ್ಳಬಹುದು, ಅಸೂಯೆ ಪಡಬಹುದು ಅಥವಾ ಹತಾಶರಾಗಬಹುದು. ಆದರೆ ಇವೆಲ್ಲದರ ಹಿಂದೆ ಅವರದ್ದೇ ಆದ ಶ್ರಮ, ಪ್ರಗತಿಯ ವೇಗವಿದೆ ಎಂದರೆ ಮನಸ್ಸು ಒಪ್ಪುವುದಿಲ್ಲ. ಇದಕ್ಕೆ ಪುಷ್ಟಿ ಎಂಬಂತೆ ಕೆಲವರು ತಾವು ಬೆಳವಣಿಗೆಯನ್ನು ಯಾವುದೇ ಕಷ್ಟವಿಲ್ಲದೆ ಹೊಂದಿದೆವು ಎಂದೋ, ಯಾವುದಾದರೂ ದೇವರ ಕೃಪೆಯಿಂದಷ್ಟೇ ಹೀಗಾದದ್ದು ಎಂದೋ ಹೇಳುತ್ತಾರೆ. ಹೀಗೆ ಹೇಳುವವರು ಸುಳ್ಳು ಹೇಳುತ್ತಿರುತ್ತಾರೆ ಅಥವಾ ಯಾವುದಾದರೂ ಕಳ್ಳ ಮಾರ್ಗದಲ್ಲಿ ಪ್ರಗತಿ ಹೊಂದಿರುತ್ತಾರೆ. ಇದನ್ನು ತಿಳಿಯದ ಅಥವಾ ಒಪ್ಪಿಕೊಳ್ಳದ ಕೆಲವು ಜನ ಸ್ವಲ್ಪವೂ ಯೋಚಿಸದೆ ತಾವು ಬೆಳೆಯದಿರುವುದಕ್ಕೆ ಯಾವುದೋ ದೇವರ ಶಾಪ ಅಥವಾ ಪೂರ್ವ ಜನ್ಮದ ಪಾಪವೇ ಇರಬೇಕು ಅಥವಾ ಯಾರೋ ತಮ್ಮನ್ನು ಕಂಡರಾಗದವರು ಮಾಟ ಮಾಡಿಸಿರಬೇಕು ಎಂದು ಮನಸ್ಸನ್ನು ದುರ್ಬಲಗೊಳಿಸಿಕೊಂಡು ಹಲವೆಡೆ ಹೀಗೆ ಜ್ಯೋತಿಷ್ಯ, ಭವಿಷ್ಯ ಕೇಳುತ್ತಾರೆ. ಈ ರೀತಿ ದುರ್ಬಲಗೊಂಡವರ ಮನಸ್ಸಿಗೆ ತಾತ್ಕಾಲಿಕ ನೆಮ್ಮದಿ ಕೊಡುವಂತಹ ಒಂದು ಸುಲಭ ಸಾಧನ ಜ್ಯೋತಿಷ್ಯ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಿ ವಾಹಿನಿಗಳು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳುತ್ತಿವೆ. ಜನಕ್ಕೆ ಏನು ಬೇಕೋ ಅದನ್ನು ಕೊಡುವುದು. ಅವರಿಗೆ ಅಗತ್ಯವಿರುವುದನ್ನಲ್ಲ.
  
   ಪತ್ರಿಕಾರಂಗವನ್ನು ಒಂದು ಉದ್ಯಮವಾಗಿ ಕಂಡ ದಿನದಿಂದ ಇಂತಹ ಅವಾಂತರಗಳನ್ನು ನೋಡುತ್ತಲೇ ಬಂದಿದ್ದೇವೆ. ನಾವು ಹೇಗೆ ಒಂದು ಅನಾಥಾಶ್ರಮ ವನ್ನು ಒಂದು ವ್ಯಾಪಾರ ಮಾಡುವ ಸ್ಥಳವಾಗಿ ನೋಡುವುದಿಲ್ಲವೋ ಹಾಗೆಯೇ ಪತ್ರಿಕಾರಂಗ ಕೂಡ ಒಂದು ಸೇವೆ. ಅಲ್ಲಿ ಸಾಮಾಜಿಕ ಅಗತ್ಯಗಳಿಗೆ ಹೊರತಾದ ವಿಷಯಗಳಿಗೆ ಅವಕಾಶಗಳಿರಬಾರದು.

ಶುಕ್ರವಾರ, ಫೆಬ್ರವರಿ 13, 2015

ಲಡಾಯಿ ಮರೆತ ವೀರರು

ಲಡಾಯಿ ಮರೆತ ವೀರರು

ತೂರಿ ಬಂದ ಗಾಳಿಯಲ್ಲಿ
ತೇಲಿ ಹೋದಿರೆಲ್ಲಿಗೆ?
ಚಿಗುರು ಮೂಡಿ ಬಂದ ವನಕೆ
ತಿಮಿರ ಹಾಸಿ ಮೆಲ್ಲಗೆ.

ಕಣಿವೆ ಬಿಟ್ಟು ಬೆಟ್ಟ ತುದಿಗೆ
ಧ್ವಜವ ನೆಟ್ಟ ನಿಮಗೆ,
ಕಷ್ಟವಾಯ್ತೆ ದಾರಿ ಕೋಲು
ಕೊಟ್ಟು ನಡೆಸಲೆಮಗೆ?

ಕಷ್ಟ ಪಟ್ಟು ಹುತ್ತ ಕಟ್ಟಿ
ಹಾವು ತಂದಿರೇತಕೆ?
ಕತ್ತಿಯದರ ಕೈಗೆ ಕೊಟ್ಟು
ತುಕ್ಕು ಹಿಡಿದಿರೇತಕೆ?

ಲಡಾಯಿ ಮರೆತ ವೀರರು ನೀವು
ಸೋಲಿಸಿದ್ದು ನಮ್ಮನು
ಹಬ್ಬಿ ನಿಂತ ವಿಷದ ಕೀವು
ಕರಗಿಸಿದ್ದು ದೇಶವನು,
ಕರಗಿಸಿದ್ದು ದೇಶವನು.

ಶನಿವಾರ, ಜನವರಿ 25, 2014

ನೆನಪು

ನೆನಪು

ಮರೆಯಲಾಗದೆ ಇಂದು
ಮತ್ತೆ ಹಾಡುತಲಿರುವೆ
ಹಾಡಿನಲ್ಲಿಯೆ ನಿನ್ನ
ಮತ್ತೆ ಕಾಣುತಲಿರುವೆ
ಹಾಡಿನಾs ಸ್ವರ ಏರಿದಂತೆ, 
ನೆನಪಿನಾಳಕೆ ಇಳಿಯುತಿರುವೆ.

ಮಲೆಯ ಎತ್ತರದಲ್ಲಿ ನಿಂತು
ಅರುಣೋದಯಕೆ ಕಾಯುತಿರುವೆ
ಪ್ರಥಮ ಕಿರಣದ ಪ್ರತಿಎಳೆಗಳಲ್ಲೂ
ನಿನ್ನದೇ ಛಾಯೆ ಕಾಣುತಿರುವೆ
ಸೂರ್ಯ ನೆತ್ತಿಗೇರಿದಂತೆ
ಅದೇ ಬಿಸಿಲಿಗೆ ಬಾಡುತಲಿರುವೆ.

ಮರೆವೆನಿಂದು ಎಂದು
ಕಾತರಿಸಿ ಕಾಯುತಿರುವೆ
ಮರೆಯುವಷ್ಟರಲ್ಲಿ ನಿನ್ನ
ಮತ್ತೆ ನೆನಪಿಸಿಕೊಳ್ಳುವೆ.

-ವಿಶ್ವನಾಥ್. ಡಿ. ಎ

೧೨/೧/೨೦೧೪

ಶನಿವಾರ, ಮಾರ್ಚ್ 2, 2013

ಕಾಲ ಯಾತ್ರಿಕ

ಕಾಲ ಯಾತ್ರಿಕ












ಎಷ್ಟೋ ವರ್ಷಗಳ ಕಳೆದು ಬಂದಿಹೆನು,
ಘಟಿಸಿದನೇಕ ನಾಗರೀಕತೆಗಳ ಕಣ್ಣಿಂದ ಕಂಡಿಹೆನು.
ಹಸಿವು ದ್ವೇಷಗಳ ಹಲವು ವೇಷ,
ಪ್ರೀತಿ ಸ್ನೇಹಗಳ ಕೊಳೆತ ಕೋಶ,
ಹೊತ್ತು ತಿರುಗುತ ಹೊತ್ತು ಕಳೆಯುವ,
ಸಾವಿರ ಮಂದಿಯ ಹಿಂದಿಕ್ಕಿ ಬಂದಿಹೆನು.
ಹೊರಟಾಗ ಸಮಧಾನವಿತ್ತು, ನಿರೀಕ್ಷೆಯಿತ್ತು:
"ಹುಡುಕುವೆನು, ಬದುಕುವೆನು ಹೊಸತು ನೆಲೆಯೊಂದನು."
ಒಂದಾಯಿತು, ಎರಡಾಯಿತು, ಅದೆಷ್ಟಾಯಿತೋ,
ಎಣಿಕೆಯೇ ಮರೆತುಹೋಯಿತು.
ಎಷ್ಟು ಹುಡುಕಿದರೂ ಅಷ್ಟೇ,
ನಾನಂದುಕೊಂಡ ನೆಲೆ ಸಿಗಲೇ ಇಲ್ಲ.
ಎಷ್ಟು ಪ್ರಯತ್ನಪಟ್ಟರೂ ಅಷ್ಟೇ,
ಮನುಷ್ಯ ನೀ ಬದಲಾಗಲೇ ಇಲ್ಲ.

-ವಿಶ್ವನಾಥ್ . ಡಿ . ಎ