ಶನಿವಾರ, ಮಾರ್ಚ್ 2, 2013

ಕಾಲ ಯಾತ್ರಿಕ

ಕಾಲ ಯಾತ್ರಿಕ












ಎಷ್ಟೋ ವರ್ಷಗಳ ಕಳೆದು ಬಂದಿಹೆನು,
ಘಟಿಸಿದನೇಕ ನಾಗರೀಕತೆಗಳ ಕಣ್ಣಿಂದ ಕಂಡಿಹೆನು.
ಹಸಿವು ದ್ವೇಷಗಳ ಹಲವು ವೇಷ,
ಪ್ರೀತಿ ಸ್ನೇಹಗಳ ಕೊಳೆತ ಕೋಶ,
ಹೊತ್ತು ತಿರುಗುತ ಹೊತ್ತು ಕಳೆಯುವ,
ಸಾವಿರ ಮಂದಿಯ ಹಿಂದಿಕ್ಕಿ ಬಂದಿಹೆನು.
ಹೊರಟಾಗ ಸಮಧಾನವಿತ್ತು, ನಿರೀಕ್ಷೆಯಿತ್ತು:
"ಹುಡುಕುವೆನು, ಬದುಕುವೆನು ಹೊಸತು ನೆಲೆಯೊಂದನು."
ಒಂದಾಯಿತು, ಎರಡಾಯಿತು, ಅದೆಷ್ಟಾಯಿತೋ,
ಎಣಿಕೆಯೇ ಮರೆತುಹೋಯಿತು.
ಎಷ್ಟು ಹುಡುಕಿದರೂ ಅಷ್ಟೇ,
ನಾನಂದುಕೊಂಡ ನೆಲೆ ಸಿಗಲೇ ಇಲ್ಲ.
ಎಷ್ಟು ಪ್ರಯತ್ನಪಟ್ಟರೂ ಅಷ್ಟೇ,
ಮನುಷ್ಯ ನೀ ಬದಲಾಗಲೇ ಇಲ್ಲ.

-ವಿಶ್ವನಾಥ್ . ಡಿ . ಎ

ಮಂಗಳವಾರ, ಸೆಪ್ಟೆಂಬರ್ 18, 2012

ಒಲವಿನ ನೆನಪು



ಒಲವಿನ ನೆನಪು


ತೊರೆಯದಿರು ಗೆಳತಿ ಎನ್ನ,

ಪ್ರೀತಿ ಅರಮನೆ ಚನ್ನ

ಬಾಳ ಕೊಂಡಿಯ ಕಳಚಿ,

ಮರೆತು ಹೋಗದಿರೆನ್ನ.

ನೀನು ಮರೆತರೂ ಸರಿಯೇ,

ತೊರೆದು ಹೋದರೂ ಸರಿಯೆ,

ನನ್ನ ಮನದಲಿ ಸದಾ ತುಂಬುವೆ ನೀ,

ಅಗಣಿತ ಪ್ರೀತಿಯ ಅಮೃತ ಬಿಂದುಗಳ.



ಕಾಲವು ಎಲ್ಲ ಮರೆಸುವುದು,

ಎಂದು ನೀ ಬಗೆದರೆ ಗೆಳತಿ,

ಹಾಡುವೆನು ಹಾಡಿನ ಪಲ್ಲವಿಯಂತೆ,

ಮತ್ತೆ ಮತ್ತೆ ನಿನ್ನ ನೆನಪನ್ನು.

ನೀ ಮರಳಿ ಬರುವ ತನಕ,

ಪ್ರೀತಿಯ ಒರತೆ ಮತ್ತೆ ಚಿಮ್ಮುವ ತನಕ.



ಬಾಳ್ವೆ ಮುಗಿದರೆ ಹೇಗೆ,

ಎಂಬ ಚಿಂತೆಯೆ ಗೆಳತಿ?

ಹಚ್ಚಿ ಬರುವೆನು ನೀ ಕೊಟ್ಟ

ಒಲವು ಹೊನ್ನಿನ ಬಣ್ಣ

ವಿಶ್ವದ ಪರಿಧಿ ಮೀರಿ,

ನಿನ್ನ ಹಿಂದೆ ಬರುವ ಮುನ್ನ.


(ಸಂದರ್ಭ- ಬಾಳ ಸಂಗಾತಿ ಸಾಯುವ ಮುನ್ನ ಗೆಳೆಯನ ಮಾತುಗಳು)


-ವಿಶ್ವನಾಥ್. ಡಿ. ಎ

ಬುಧವಾರ, ಜುಲೈ 11, 2012

ನನ್ನ ಅಮ್ಮ

ಕಂಗಳಲಿ ತುಂಬಿರುವ ಕನಸಿನಂತೆ,

ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.

ಹರಿವ ನದಿಯೊಳಗಿನಾ ಸುಳಿಗಳಂತೆ,

ನಿನ್ನ ಪ್ರೀತಿಯು ಎನಗೆ ಅನಂತೆ.



ಮುದುಡಿದಾ ಮಲ್ಲಿಗೆಯು ಅರಳುವಂತೆ,

ಸುಡುವ ಬಿಸಿಲೊಳಗೂ ನೆರಳಿನಂತೆ,

ಋತುಗಳಾ ಚಂಚಲತೆ ಮೀರಿನಿಂತೆ,

ನಿನ್ನ ಪ್ರೀತಿಗೆ ನಾ ಶರಣು ಎಂದಿನಂತೆ.



-ವಿಶ್ವನಾಥ್ . ಡಿ. ಎ

ನಾನು ಮತ್ತು ಅಲಿಫ್ ಲೈಲಾ

ಇದು ನಾನು ಒಂದು ಎಂಟು ಹತ್ತು ವರ್ಷದವನಿದ್ದಾಗ ದಾವಣಗೆರೆಯಲ್ಲಿ ನನ್ನ ಅಜ್ಜಿಯ ಮನೆಯಲ್ಲಿ ನಡೆದ ಘಟನೆ. ನನ್ನ ಗೆಳೆಯ ಮುತ್ತು(ಮೃತ್ಯುಂಜಯ), ನನ್ನ ಮನೆಯಿಂದ ಹೊರ ಬರಲು ಹೇಳಿದ. ಸಂಜೆ ಏಳಾಗಿದ್ದಿರಬಹುದು. ಈಗ ಯಾವ ಆಟಕ್ಕೆ ಕರಿಯುತ್ತಾನಿವನು ಎಂದು ಹೊರಬಂದು,” ಏನ್ಲೇ?” ಎಂದೆ. “ ಬಾರ್ಲೆ ಹೇಳ್ತನಿ.” ಎಂದು ನನ್ನ ಮನೆಯಿಂದ ಒಂದು ಹತ್ತು ಅಡಿ ದೂರ ಕರೆದೊಯ್ದ. “ಲೇ ಅಲಿಫ್ ಲೈಲಾ ನೋಡಿಯೇನ್ಲೇ?” ಎಂದ.
ನಾನು “ ಏನ್ಲೇ ಹಂಗಂದ್ರೆ?” ಎಂದೆ.
“ಏ ಅಷ್ಟೂ ಗೊತ್ತಿಲೇನ್ಲೇ?ಅದು ಬೆಂಕಿನಾಗೆ ಮ್ಯಾಜಿಕ್ ಮಾಡೋದು.” ಅಂದ.
“ಅದೆಂಥದಲೇ ನಿನ್ನ ಮ್ಯಾಜಿಕ್ಕು. ತೋರ್ಸು ನೋಡನ.”
“ಸರಿ ಹಂಗಂದ್ರೆ, ಬೇಗ ಒಂದು ಬಾಟ್ಲಿ ಮುಚ್ಚುಳ, ಸಲ್ಪ ಮೇಣ, ಒಂದು ಕಡ್ಡಿಪೆಟ್ಟಿಗಿ ತಾ.”
“ಯಾಕೇಳು. ಕಡ್ಡಿಪೆಟಿಗಿ ತಂದ್ರೆ ನಮ್ಮ ಮನ್ಯಾಗ್  ಬೈತಾರ್ಲೆ. ನೀನೆ ತಂಬಾ.”
“ಹೋಗಲೇ, ತರಂಗಿದ್ರೆ ತಾ, ಇಲ್ಲಾಂದ್ರೆ ಬಿಡು.” ಎಂದ. ಕುತೂಹಲ ಬಿಟ್ಟೀತೆ. ಮೆಲ್ಲಗೆ ಮನೆಯೊಳಗೆ ಹೋಗಿ ಕಡ್ಡಿಪೆಟ್ಟಗೆ ಮತ್ತು ಮೇಣದಬತ್ತಿಯ ಸುತ್ತಲ ಕರಗಿದ ಮೇಣ, ಹಳೇ ಚೆಸ್ಟ್ರಾನ್ ಬಾಟಲ ಬೂಚು ಆರಿಸಿ ತಂದೆ.
“ಹ್ಞೂ ತೋರ್ಸಪ ಹೆಂಗೆ ಮಾಡೋದು?” ಎಂದು ನಮ್ಮ ಎಮ್ಮೆ ಕಟ್ಟುತಿದ್ದ ಜಾಗದ ಬಳಿ ಬಂದೆವು. ಆ ಜಾಗಕ್ಕೆ ಎರಡು ಕಡೆ ಮಾಮೂಲು ಗೋಡೆಯಿದ್ದರೆ, ಇನ್ನೆರಡು ಕಡೆ ತೆಂಗಿನ ಗರಿಯಿಂದ ಮಾಡಿದ ಗೋಡೆ. ಅದಾಗಲೇ ಕಟ್ಟಿ ವರ್ಷವಾಗುತ್ತ ಬಂದಿರಬೇಕು. ಗರಿಗಳೆಲ್ಲ ತುಂಬ ಒಣಗಿದ್ದವು. ತೀರ ಅದಕ್ಕೆ ಹತ್ತಿರವೇನು ನಾವು ಇದ್ದಿರಲಿಲ್ಲ. ಒಂದು ಹತ್ತು ಅಡಿ ದೂರದಲ್ಲಿ ನಿಂತಿದ್ದೆವು.
“ತಡಿಯಲೇ. ಮೊದ್ಲು ಮೂರು ಕಲ್ಲು ತರನ ತಡಿ, ಈ ಬೂಚು ನಿಲ್ಲಿಸ್ಬೇಕಲ್ಲ.” ಎಂದು ಮೂರು ಸರಿಯಾದ ಕಲ್ಲುಗಳನ್ನು ಹುಡುಕುತ್ತ, ನನಗೆ ಹುಲ್ಲು, ಕಡ್ಡಿ ಆರಿಸಲು ಹೇಳಿದ. “ಕೊಟ್ಟಿಗೆಯಲ್ಲೇ ಇರುತ್ತಲ್ಲ ಹುಲ್ಲು,ಅದನ್ಯಾಕೆ ಹುಡುಕಬೇಕು” ಅಂತ ಕೇಳ್ತೀರ?ಅವತ್ತು ಯಾರ ಅದೃಷ್ಟಕ್ಕೋ, ಅಲ್ಲಿ ಒಣ ಹುಲ್ಲು ಇನ್ನೂ ಒಟ್ಟಿರಲಿಲ್ಲ.
ಸರಿ ನಮ್ಮ ಹುಡುಕಾಟ ಮುಗಿದು, ಕಲ್ಲು ಜೋಡಿಸಿ, ಬೂಚು ಅದರ ಮೇಲಿಟ್ಟು ತಯಾರಾದೆವು. ಅದರ ಕೆಳಗೆ ಸ್ವಲ್ಪ ಒಣ ಹುಲ್ಲು ಇಟ್ಟೆವು. ಅಷ್ಟರಲ್ಲಿ ಮತ್ತೆ ನೆನಪಿಸಿಕೊಂಡು, ಸ್ವಲ್ಪ ನೀರು ತರಲು ಹೇಳಿದ;ತಂದೆ. ಮೇಣ ಅದರಲ್ಲಿಟ್ಟು, ಬೆಂಕಿ ಇನ್ನೇನು ಹಚ್ಚಬೇಕು ಅನ್ನುವಷ್ಟರಲ್ಲಿದ್ದೆವು. ನನಗೋ ಇವನು ಅಷ್ಟು ಹೇಳಿದ ಅಲಿಫ್ ಲೈಲಾ ಹ್ಯಾಗಿದ್ದಾಳೋ ಎಂದು ನೋಡುವ ಕಾತುರ.
ಆಗಬೇಕಾಗಿದ್ದುದು ಇಷ್ಟು. ಬೂಚಿನಲ್ಲಿ ಮೇಣ ಇಟ್ಟು, ಕೆಳಗಿನಿಂದ ಕಾಯಿಸಿದಾಗ, ಮೇಣ ಕರಗುತ್ತದೆ. ಹೌದೇ? ಈಗ ಹಾಗೆ ಕರಗಿದ ಮೇಣದ ಸುತ್ತ ಬೆಂಕಿ ಆವರಿಸಿಕೊಳ್ಳುತ್ತಿರುವಾಗ, ಕೊಂಚ ನೀರು ಚಿಮುಕಿಸಿದರೆ, ಇಷ್ಟಿದ್ದ ಬೆಂಕಿ ದೊಡ್ಡದಾಗಿ ಏಳುತ್ತದೆ.ಈಗ ಸರ್ಕಸ್ ನಲ್ಲಿ ವಿದೂಷಕರು ಕೈಯಲ್ಲಿ ಚಿಕ್ಕ ಪಂಜು ಹಿಡಿದು, ಬಾಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆ ಬೆಂಕಿಯ ಮೇಲೆ ಉಗುಳಿದಾಗ ಬೆಂಕಿ ಧಗ್ಗೆಂದು ಏಳುತ್ತಲ್ಲ , ಹಾಗೆಯೆ ಇಲ್ಲು ಆಗುತ್ತದೆ.
ಆದರೆ ಆದದ್ದೇನು? ಇನ್ನೇನು ಇಬ್ಬರೂ ಬೆಂಕಿ ಹಚ್ಚಬೇಕು, ನನ್ನ ಕಿವಿಯ ಮೇಲೆ ರಪ್ಪೆಂದು ಒಂದು ಏಟು ಬಿತ್ತು. ಏನಾಯಿತು ಎಂದು ನೋಟುವಷ್ಟರಲ್ಲಿ ನನ್ನ ಮಾವ,” ನೆರಿಕೀಗೆ ಬೆಂಕಿ ಹಚ್ಚಕತಿರೇನ್ರಲೇ?” ಎಂದು ಇಬ್ಬರನ್ನೂ ಹೊಡೆದು ಓಡಿಸಿದರು. ಇನ್ನು ಈ ಆರ್ಭಟದಲ್ಲಿ ನಮ್ಮ ಅಲಿಫ್ ಲೈಲಾಳ ಬಗ್ಗೆ ಅವರಿಗೆ ಹೇಳಲಾದೀತೆ? ಅಂತು ನನಗೆ ಅಲಿಫ್ ಲೈಲಾ ನೋಡುವ ಭಾಗ್ಯ ಇಲ್ಲದಂತಾಯಿತು. ಅದಾದ ಮೇಲೆ ಎಷ್ಟೋ ಸಾರಿ ಮತ್ತೆ ಅದನ್ನೇಕೆ ಮಾಡಬಾರದು ಎಂದೆನಿಸಿದ್ದಿದೆ. ಬಹುಶಃ ಅಂದು ಕಾಣಬೇಕಾಗಿದ್ದ ಅಲಿಫ್ ಲೈಲಾಳೇ ಬರುವಳೋ ಇಲ್ಲವೋ ಅನ್ನುವ ಅನುಮಾನವಿದ್ದಿರಬೇಕು.

-ವಿಶ್ವನಾಥ್.ಡಿ.ಎ

ಕನ್ನಡಿಯೊಳಗಿನ ಬದುಕು

ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಚಂದ,
ಲೋಕದೊಳತಿ ಸುಂದರನು ನಾನೇ.
ಕನ್ನಡಿಯೊಳಗಲ್ಲದೆ ಬೇರಲ್ಲೂ ಕಾಣದ,
ನನ್ನ ಮುಖ ನೋಡಿ ಹಿಗ್ಗಿದ್ದೆ.
 
ಮರಣದಂಚಿನಲ್ಲಿದ್ದ ಅಪ್ಪ,
ಮೂರು ನಿಮಿಷವಾದರೂ ಹೆಚ್ಚು ಬದುಕಲೆಂದು,
ಲಕ್ಷ ಖರ್ಚು ಮಾಡಿದ್ದೆ.
ಅಪ್ಪನ ಮೇಲೆ ನಾ ತೋರಿದ ಪ್ರೀತಿಗೆ ಮೆಚ್ಚಿ,
ನನ್ನ ನಾ ಹೊಗಳಿಕೊಂಡಿದ್ದೆ.
 
ಹಳೆಯಮನೆಯಲಿ ಅಮ್ಮ,
ಒಬ್ಬಳಿರಲೇಕೆಂದು ಹೇಳಿ,
ನನ್ನ ಮನೆಗೇ ಕರೆತಂದಿದ್ದೆ.
ಮುಪ್ಪಿನ ಕಾಲದಲಿ ಒಂಟಿ ತಾ ಎಂದೆನಿಸದೆ,
ಮೊಮ್ಮಕ್ಕಳೊಡನಾಡಿಕೊಂಡಿರಲೆಂದು ಕರೆತಂದಿದ್ದೆ.
 
ಲಕ್ಷವದು ಖರ್ಚುಮಾಡಿದ್ದು ಪ್ರೀತಿಗಲ್ಲ,
ಇನ್ನಾದರೂ ಆಸ್ತಿ ಕೊಡುವನೇನೋ ಎಂದು.
ಆಕೆಯನು ತಂದದ್ದು ತಾಯಿಯ ಪ್ರೀತಿಗಲ್ಲ,
ಮನೆಯ ಕೆಲಸದಲಿ ನನ್ನಾಕೆಯೊಡನಿರಲೆಂದು.
ಕ್ರೌರ್ಯ, ಸ್ವಾರ್ಥ, ಲೋಭ ಇವ್ಯಾವೂ
ಕಾಣಲೇ ಇಲ್ಲ ಈ ಕನ್ನಡಿಯಲ್ಲಿ.
 
ಕನ್ನಡಿಯಲಿ ಕಂಡದ್ದು,
ಕಂಡು ನಾ ಮೆಚ್ಚಿದ್ದು,
ನಾನಲ್ಲದ ನನ್ನನ್ನು,
ಮಾನವತೆಯ ಮುಗ್ಧ ನಗೆ ನಕ್ಕಿ,
ನನ್ನನ್ನೇ ನೋಡುತಿದ್ದ ಮುಖವಿದ್ದ,
ಕನ್ನಡಿಯೊಳಗಿನ ಬದುಕನ್ನು.
-ವಿಶ್ವನಾಥ್.ಡಿ.ಎ

ಒಮ್ಮೆ ನಕ್ಕುಬಿಡು...


ಒಮ್ಮೆ ನಕ್ಕುಬಿಡು,
 
ಮನದ ಭಾರ ಕಳೆದು,
ನಾಳೆ ಮತ್ತೆ ಹೊಸ
ಬೆಳಕು ಮೂಡುವ
ಕನಸ ಕಟ್ಟಿ ನಡೆದು.


ಭರವಸೆಯ ಮೂಡಿಸು,
ಬತ್ತಿ ಹೋದ ಕಣ್ಣಲ್ಲಿ,
ಆಸೆಯ ಅರಳಿಸು,
ಮುದುಡಿದಾ ಬದುಕಲ್ಲಿ,
ನಿಂತ ಜಗಕೆ, ಜಗದಾ ಜಡತೆಗೆ
ಚಲನೆಯ ಮರಳಿಸು.


ಹಸಿವನು ಹೊತ್ತಿಸು,
ಜ್ಞಾನದ ಎಡೆಯಲ್ಲಿ,
ಕ್ರಾಂತಿಯ ಮೊಳಗಿಸು,
ಬೆಳವಣಿಗೆಯ ದಿಕ್ಕಿನಲ್ಲಿ,
ಹೂತ ಹೆಜ್ಜೆಗಳಿಗೊಂದು ಗಟ್ಟಿ
ನೆಲವನ್ನು ಕೊಟ್ಟು ನಡೆಸು.

- ವಿಶ್ವನಾಥ್.ಡಿ.ಎ

ಚಂದ್ರನೆಡೆಗಿನ ವಲಸಿಗರು

ಬೀದಿಯೆಲ್ಲಾ ಜನಗಳು
ಒಬ್ಬಂಟಿಗಳು,
ಇಬ್ಬದಿಯಲ್ಲೂ ಮನೆಗಳು
ಖಾಲಿ ಮನಗಳು,
ಗುಡಿಯ ತುಂಬ ಭಜನೆಗಳು
ಕಿವುಡು ಕಿವಿಗಳು,
ಹೊರಟಿಹರು ಚಂದ್ರನೆಡೆಗೆ ವಲಸಿಗರು.


ದುಃಖ ತಪ್ತ ಕಂಗಳು
ನೀರಾಡವು,
ಹಣ ತುಂಬಿದ ಕೈಗಳು
ಸಾಲದವು,
ಕತ್ತಲು ತುಂಬಿದ ರಾತ್ರಿಗಳು
ಬೆಳಗುವವು,
ಹೊರಟಿಹರು ಚಂದ್ರನೆಡೆಗೆ ವಲಸಿಗರು.


ಹಿಂದೆ ಎಂದೋ ಒಮ್ಮೆ
ಬದುಕೂ ಇತ್ತು,
ಹೊರಟಿದ್ದರು ಸೂರ್ಯನೆಡೆಗೆ.



- ವಿಶ್ವನಾಥ್. ಡಿ. ಎ (Jonathan King ರ “Everyone’s gone to the Moon”ನ ಭಾವಾನುವಾದ)