ಬುಧವಾರ, ಜುಲೈ 11, 2012

ನಾನು ಮತ್ತು ಅಲಿಫ್ ಲೈಲಾ

ಇದು ನಾನು ಒಂದು ಎಂಟು ಹತ್ತು ವರ್ಷದವನಿದ್ದಾಗ ದಾವಣಗೆರೆಯಲ್ಲಿ ನನ್ನ ಅಜ್ಜಿಯ ಮನೆಯಲ್ಲಿ ನಡೆದ ಘಟನೆ. ನನ್ನ ಗೆಳೆಯ ಮುತ್ತು(ಮೃತ್ಯುಂಜಯ), ನನ್ನ ಮನೆಯಿಂದ ಹೊರ ಬರಲು ಹೇಳಿದ. ಸಂಜೆ ಏಳಾಗಿದ್ದಿರಬಹುದು. ಈಗ ಯಾವ ಆಟಕ್ಕೆ ಕರಿಯುತ್ತಾನಿವನು ಎಂದು ಹೊರಬಂದು,” ಏನ್ಲೇ?” ಎಂದೆ. “ ಬಾರ್ಲೆ ಹೇಳ್ತನಿ.” ಎಂದು ನನ್ನ ಮನೆಯಿಂದ ಒಂದು ಹತ್ತು ಅಡಿ ದೂರ ಕರೆದೊಯ್ದ. “ಲೇ ಅಲಿಫ್ ಲೈಲಾ ನೋಡಿಯೇನ್ಲೇ?” ಎಂದ.
ನಾನು “ ಏನ್ಲೇ ಹಂಗಂದ್ರೆ?” ಎಂದೆ.
“ಏ ಅಷ್ಟೂ ಗೊತ್ತಿಲೇನ್ಲೇ?ಅದು ಬೆಂಕಿನಾಗೆ ಮ್ಯಾಜಿಕ್ ಮಾಡೋದು.” ಅಂದ.
“ಅದೆಂಥದಲೇ ನಿನ್ನ ಮ್ಯಾಜಿಕ್ಕು. ತೋರ್ಸು ನೋಡನ.”
“ಸರಿ ಹಂಗಂದ್ರೆ, ಬೇಗ ಒಂದು ಬಾಟ್ಲಿ ಮುಚ್ಚುಳ, ಸಲ್ಪ ಮೇಣ, ಒಂದು ಕಡ್ಡಿಪೆಟ್ಟಿಗಿ ತಾ.”
“ಯಾಕೇಳು. ಕಡ್ಡಿಪೆಟಿಗಿ ತಂದ್ರೆ ನಮ್ಮ ಮನ್ಯಾಗ್  ಬೈತಾರ್ಲೆ. ನೀನೆ ತಂಬಾ.”
“ಹೋಗಲೇ, ತರಂಗಿದ್ರೆ ತಾ, ಇಲ್ಲಾಂದ್ರೆ ಬಿಡು.” ಎಂದ. ಕುತೂಹಲ ಬಿಟ್ಟೀತೆ. ಮೆಲ್ಲಗೆ ಮನೆಯೊಳಗೆ ಹೋಗಿ ಕಡ್ಡಿಪೆಟ್ಟಗೆ ಮತ್ತು ಮೇಣದಬತ್ತಿಯ ಸುತ್ತಲ ಕರಗಿದ ಮೇಣ, ಹಳೇ ಚೆಸ್ಟ್ರಾನ್ ಬಾಟಲ ಬೂಚು ಆರಿಸಿ ತಂದೆ.
“ಹ್ಞೂ ತೋರ್ಸಪ ಹೆಂಗೆ ಮಾಡೋದು?” ಎಂದು ನಮ್ಮ ಎಮ್ಮೆ ಕಟ್ಟುತಿದ್ದ ಜಾಗದ ಬಳಿ ಬಂದೆವು. ಆ ಜಾಗಕ್ಕೆ ಎರಡು ಕಡೆ ಮಾಮೂಲು ಗೋಡೆಯಿದ್ದರೆ, ಇನ್ನೆರಡು ಕಡೆ ತೆಂಗಿನ ಗರಿಯಿಂದ ಮಾಡಿದ ಗೋಡೆ. ಅದಾಗಲೇ ಕಟ್ಟಿ ವರ್ಷವಾಗುತ್ತ ಬಂದಿರಬೇಕು. ಗರಿಗಳೆಲ್ಲ ತುಂಬ ಒಣಗಿದ್ದವು. ತೀರ ಅದಕ್ಕೆ ಹತ್ತಿರವೇನು ನಾವು ಇದ್ದಿರಲಿಲ್ಲ. ಒಂದು ಹತ್ತು ಅಡಿ ದೂರದಲ್ಲಿ ನಿಂತಿದ್ದೆವು.
“ತಡಿಯಲೇ. ಮೊದ್ಲು ಮೂರು ಕಲ್ಲು ತರನ ತಡಿ, ಈ ಬೂಚು ನಿಲ್ಲಿಸ್ಬೇಕಲ್ಲ.” ಎಂದು ಮೂರು ಸರಿಯಾದ ಕಲ್ಲುಗಳನ್ನು ಹುಡುಕುತ್ತ, ನನಗೆ ಹುಲ್ಲು, ಕಡ್ಡಿ ಆರಿಸಲು ಹೇಳಿದ. “ಕೊಟ್ಟಿಗೆಯಲ್ಲೇ ಇರುತ್ತಲ್ಲ ಹುಲ್ಲು,ಅದನ್ಯಾಕೆ ಹುಡುಕಬೇಕು” ಅಂತ ಕೇಳ್ತೀರ?ಅವತ್ತು ಯಾರ ಅದೃಷ್ಟಕ್ಕೋ, ಅಲ್ಲಿ ಒಣ ಹುಲ್ಲು ಇನ್ನೂ ಒಟ್ಟಿರಲಿಲ್ಲ.
ಸರಿ ನಮ್ಮ ಹುಡುಕಾಟ ಮುಗಿದು, ಕಲ್ಲು ಜೋಡಿಸಿ, ಬೂಚು ಅದರ ಮೇಲಿಟ್ಟು ತಯಾರಾದೆವು. ಅದರ ಕೆಳಗೆ ಸ್ವಲ್ಪ ಒಣ ಹುಲ್ಲು ಇಟ್ಟೆವು. ಅಷ್ಟರಲ್ಲಿ ಮತ್ತೆ ನೆನಪಿಸಿಕೊಂಡು, ಸ್ವಲ್ಪ ನೀರು ತರಲು ಹೇಳಿದ;ತಂದೆ. ಮೇಣ ಅದರಲ್ಲಿಟ್ಟು, ಬೆಂಕಿ ಇನ್ನೇನು ಹಚ್ಚಬೇಕು ಅನ್ನುವಷ್ಟರಲ್ಲಿದ್ದೆವು. ನನಗೋ ಇವನು ಅಷ್ಟು ಹೇಳಿದ ಅಲಿಫ್ ಲೈಲಾ ಹ್ಯಾಗಿದ್ದಾಳೋ ಎಂದು ನೋಡುವ ಕಾತುರ.
ಆಗಬೇಕಾಗಿದ್ದುದು ಇಷ್ಟು. ಬೂಚಿನಲ್ಲಿ ಮೇಣ ಇಟ್ಟು, ಕೆಳಗಿನಿಂದ ಕಾಯಿಸಿದಾಗ, ಮೇಣ ಕರಗುತ್ತದೆ. ಹೌದೇ? ಈಗ ಹಾಗೆ ಕರಗಿದ ಮೇಣದ ಸುತ್ತ ಬೆಂಕಿ ಆವರಿಸಿಕೊಳ್ಳುತ್ತಿರುವಾಗ, ಕೊಂಚ ನೀರು ಚಿಮುಕಿಸಿದರೆ, ಇಷ್ಟಿದ್ದ ಬೆಂಕಿ ದೊಡ್ಡದಾಗಿ ಏಳುತ್ತದೆ.ಈಗ ಸರ್ಕಸ್ ನಲ್ಲಿ ವಿದೂಷಕರು ಕೈಯಲ್ಲಿ ಚಿಕ್ಕ ಪಂಜು ಹಿಡಿದು, ಬಾಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆ ಬೆಂಕಿಯ ಮೇಲೆ ಉಗುಳಿದಾಗ ಬೆಂಕಿ ಧಗ್ಗೆಂದು ಏಳುತ್ತಲ್ಲ , ಹಾಗೆಯೆ ಇಲ್ಲು ಆಗುತ್ತದೆ.
ಆದರೆ ಆದದ್ದೇನು? ಇನ್ನೇನು ಇಬ್ಬರೂ ಬೆಂಕಿ ಹಚ್ಚಬೇಕು, ನನ್ನ ಕಿವಿಯ ಮೇಲೆ ರಪ್ಪೆಂದು ಒಂದು ಏಟು ಬಿತ್ತು. ಏನಾಯಿತು ಎಂದು ನೋಟುವಷ್ಟರಲ್ಲಿ ನನ್ನ ಮಾವ,” ನೆರಿಕೀಗೆ ಬೆಂಕಿ ಹಚ್ಚಕತಿರೇನ್ರಲೇ?” ಎಂದು ಇಬ್ಬರನ್ನೂ ಹೊಡೆದು ಓಡಿಸಿದರು. ಇನ್ನು ಈ ಆರ್ಭಟದಲ್ಲಿ ನಮ್ಮ ಅಲಿಫ್ ಲೈಲಾಳ ಬಗ್ಗೆ ಅವರಿಗೆ ಹೇಳಲಾದೀತೆ? ಅಂತು ನನಗೆ ಅಲಿಫ್ ಲೈಲಾ ನೋಡುವ ಭಾಗ್ಯ ಇಲ್ಲದಂತಾಯಿತು. ಅದಾದ ಮೇಲೆ ಎಷ್ಟೋ ಸಾರಿ ಮತ್ತೆ ಅದನ್ನೇಕೆ ಮಾಡಬಾರದು ಎಂದೆನಿಸಿದ್ದಿದೆ. ಬಹುಶಃ ಅಂದು ಕಾಣಬೇಕಾಗಿದ್ದ ಅಲಿಫ್ ಲೈಲಾಳೇ ಬರುವಳೋ ಇಲ್ಲವೋ ಅನ್ನುವ ಅನುಮಾನವಿದ್ದಿರಬೇಕು.

-ವಿಶ್ವನಾಥ್.ಡಿ.ಎ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ